ಟೆಕ್ಕಿ ಅಪಹರಿಸಿ ೨ ಕೋಟಿಗೆ ಬೇಡಿಕೆ ಸಿಕ್ಕಿಬಿದ್ದ ಸ್ನೇಹಿತರು

ಬೆಂಗಳೂರು,ಸೆ.೨೩- ಸ್ನೇಹಿತರೇ ಸಾಫ್ಟ್ ವೇರ್ ಇಂಜಿನಿಯರ್ ಅಪಹರಿಸಿ ೨ ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಬೇಧಿಸಿರುವ ಕೋರ
ಮಂಗಲ ಪೊಲೀಸರು ಮೂವರು ಆರೋಪಿ ಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೊಳಗಾದ ಸಾಫ್ಟ್‌ವೇರ್ ಇಂಜಿನಿಯರ್ ವಿನೀತ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಕೃತ್ಯವೆಸಗಿದ ಪ್ರಶಾಂತ್, ಸಂತೋಷ್ ಹಾಗೂ ಅರಿವೇಗನ್‌ನನ್ನು ಬಂಧಿಸಲಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ವಿನೀತ್ ಕೆಲ ತಿಂಗಳ ಹಿಂದೆ ಸ್ಟಾರ್ಟಪ್ ಕಂಪನಿ ಆರಂಭಿಸಿ ಬೇರೊಂದು ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದರ ನಡುವೆ ಆರೋಪಿ ಪ್ರಶಾಂತ್ ಹಾಗೂ ಸಂತೋಷ್‌ನೊಂದಿಗೆ ವಿನೀತ್ ಹಣಕಾಸಿನ ವ್ಯವಹಾರ ಹೊಂದಿದ್ದರು. ಆದರೆ ವಿನೀತ್ ಆರೋಪಿಗಳಿಗೆ ಕೊಡಬೇಕಾದ ಹಣ ನೀಡಲು ನಿರಾಕರಿಸಿದ್ದ. ಅಲ್ಲದೆ ಒಡಂಬಡಿಕೆ ಮಾಡಿಕೊಂಡಿದ್ದ ಕಂಪನಿಗೂ ವಿನೀತ್ ಹಣ ನೀಡಬೇಕಾಗಿತ್ತು.
ಪಾರ್ಟಿಗೆ ಆಹ್ವಾನ: ಈ ವಿಷಯ ಅರಿತ ಸ್ನೇಹಿತರು ವಿನೀತ್‌ನನ್ನು ಅಪಹರಿಸಿದರೆ ಹಣ ಗಳಿಸಬಹುದು ಎಂದು ಯೋಜನೆ ರೂಪಿಸಿ ಸ್ನೇಹಿತನಿಂದ ಫೋರ್ಡ್ ಕಾರು ಪಡೆದು ಪಾರ್ಟಿಗೆ ಆಹ್ವಾನಿಸಿದ್ದರು. ಅಪಹರಣ ಸಂಚು ಅರಿಯದ ವಿನೀತ್, ಸ್ನೇಹಿತರ ಜೊತೆ ಕಾರು ಹತ್ತಿದ್ದಾನೆ. ಕೋರಮಂಗಲ -ಸಿಲ್ಕ್ ಬೋರ್ಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕ್ರಾಸ್ ಆಗುತ್ತಿದ್ದಂತೆ ಅನುಮಾನಗೊಂಡು ವಿನೀತ್, ಎಲ್ಲಿಗೆ ಹೋಗು ತ್ತಿರುವುದಾಗಿ ಪ್ರಶ್ನಿಸಿದ್ದಾನೆ. ಈ ವೇಳೆ ಅಸಲಿ ಮುಖ ಪ್ರದರ್ಶಿಸಿದ ಕಿರಾತಕರು,ವಿನೀತ್ ಬಾಯಿಗೆ ಬಟ್ಟೆ ತುರುಕಿ ಕಿರುಚಾಡದಂತೆ ಬೆದರಿಸಿದ್ದಾರೆ.
ವಾಟ್ಸಾಪ್ ಮೆಸೇಜ್: ವಿನೀತ್‌ನನ್ನು ಆರೋಪಿಗಳು ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಇತ್ತ ಎರಡು ದಿನ ಕಳೆದರೂ ಮಗ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದಾಗ ೨ ಕೋಟಿ ರೂ ಕೊಟ್ಟರೆ ಬಿಡುವುದಾಗಿ ಆರೋಪಿಗಳು ವಾಟ್ಸಾಪ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಪತ್ತೆಯಾಗಿದೆ.
ಫಾಸ್ಟ್‌ಟ್ಯಾಕ್ ಮೆಸೇಜ್ : ದೂರು ದಾಖಲಿಸಿ ಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಇಳಿದು ಕಾರಿನ ನೋಂದಣಿ ಸಂಖ್ಯೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಜಾಡು ಹಿಡಿದಾಗ ಆರೋಪಿ ಪ್ರಶಾಂತ್ ಸ್ನೇಹಿತರೊಬ್ಬರಿಂದ ಪೋರ್ಡ್ ಕಾರು ಪಡೆದಿರುವುದು ಗೊತ್ತಾಗಿತ್ತು.
ಕಾರಿನ ಮಾಲೀಕನನ್ನು ಕರೆಯಿಸಿ ವಿಚಾರಿಸಿದಾಗ ಆರೋಪಿಗಳು ಕಾರು ಪಡೆದಿರುವುದು ದೃಢವಾಗಿತ್ತು. ಬಳಿಕ ತಮಗೆ ಬಂದ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗಿರುವ ಮೆಸೇಜ್ ಬಂದಿರುವುದನ್ನು ಮಾಲೀಕ ಪೊಲೀಸರಿಗೆ ತೋರಿಸಿದ್ದ.
ಹೋಟೆಲ್‌ನಲ್ಲಿ ಸೆರೆ: ಎಲೆಕ್ಟ್ರಾನಿಕ್ ಸಿಟಿ ಟೋಲ್ನಲ್ಲಿ ಕಾರು ಹೋಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದು ಆರೋಪಿಗಳು ತಮಿಳುನಾಡಿನಲ್ಲಿ ಇರುವ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿನತ್ತ ಪ್ರಯಾಣಬೆಳೆಸಿ ಆರೋಪಿಗಳ ಮೊಬೈಲ್ ಲೊಕೇಷನ್ ಆಧರಿಸಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಆರೋಪಿಗಳನ್ನು ಬಂಧಿಸಿ ವಿನೀತ್‌ರನ್ನು ರಕ್ಷಿಸಿದ್ದಾರೆ.