ಟೆಂಡರ್: ೨ ತಿಂಗಳ ಬಳಿಕ ಕೊಳಗೇರಿ ಮಂಡಳಿಗೆ ಶಾಸಕರ ಪತ್ರ!


ದುರುಗಪ್ಪ ಹೊಸಮನಿ
ಲಿಂಗಸುಗೂರು.ನ.೦೩- ನಮ್ಮ ಶಾಸಕರು ನಿರ್ಲಕ್ಷ್ಯ ಮಾಡಿಲ್ಲ, ಕೊಳಚೆ ಪ್ರದೇಶಗಳಿಗೆ ಅಧಿಕಾರರೂಢ ಸರಕಾರದಲ್ಲಿರುವ ಬಿಜೆಪಿ ಶಾಸಕರುಗಳ ಕ್ಷೇತ್ರಕ್ಕೆ ಮಾತ್ರ ಮನೆಗಳನ್ನು ಮಂಜೂರು ಮಾಡಲಾಗಿದೆ. ಬಿಜೆಪಿಯೇತರ ಶಾಸಕರುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ ಎನ್ನುವ ಆರೋಪಗಳು ಲಿಂಗಸುಗೂರು ಶಾಸಕರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ, ಲಭ್ಯ ದಾಖಲಾತಿಗಳ ಪ್ರಕಾರ ಟೆಂಡರ್ ಆದ ಸುಮಾರು ಎರಡು ತಿಂಗಳ ಬಳಿಕ ಮಾನ್ಯ ಶಾಸಕ ಹೂಲಗೇರಿಯವರು ಕೊಳಗೇರಿ ಮಂಡಳಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ಇದು ಶಾಸಕರ ನಿರ್ಲಕ್ಷ್ಯವಲ್ಲದೇ ಮತ್ತೇನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕರ್ನಾಟಕ ಕೊಳಗೇರಿ ಪ್ರದೇಶಾಭಿವೃದ್ಧಿ ಮಂಡಳಿಯಿಂದ ರಾಜ್ಯದೆಲ್ಲೆಡೆ ಆಯ್ಕೆಯಾದ ವಿಧಾನಸಭಾ ಕ್ಷೇತ್ರಗಳ ಕೊಳಗೇರಿಗಳಲ್ಲಿ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಜುಲೈ ೨೪, ೨೦೨೦ರಂದು ಟೆಂಡರ್ ಕರೆಯಲಾಗಿತ್ತು. ಟೆಂಡರ್ ಕರೆಯುವುದಕ್ಕೂ ಮುನ್ನವೇ ತಮ್ಮ ಕ್ಷೇತ್ರಗಳಿಗೆ ಬೇಕಾದ ಅಂಕಿ-ಸಂಖ್ಯೆಗಳನ್ನು ನೀಡುವುದು ಶಾಸಕರ ಕರ್ತವ್ಯವಾಗಿರುತ್ತದೆ. ಶಾಸಕರ ಶಿಫಾರಸ್ಸಿನ ಮೇರೆಗೆ ಮಂಡಳಿಯಿಂದ ಮನೆಗಳು ಮಂಜೂರಾಗುತ್ತವೆ. ಆದರೆ, ಲಿಂಗಸುಗೂರು ಶಾಸಕರು ಮಾತ್ರ ಈ ವಿಷಯದಲ್ಲಿ ವಿಳಂಬ ಮಾಡಿರುವುದು ದಾಖಲಾತಿಗಳಿಂದ ಸ್ಪಷ್ಟವಾಗಿ ಕಂಡುಬರುತ್ತದೆ.
೨೯/೮/೨೦೨೦ ಎಂದು ದಿನಾಂಕ ಬರೆದಿರುವ ಶಾಸಕರ ಲೆಟರ್ ಪ್ಯಾಡ್‌ನಲ್ಲಿ ಕರ್ನಾಟಕ ಕೊಳಗೇರಿ ಪ್ರದೇಶಾಭಿವೃದ್ಧಿ ಮಂಡಳಿಯ ಗುಲ್ಬರ್ಗಾ ವಿಭಾಗೀಯ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಪತ್ರ ಬರೆದಿದ್ದಾರೆ. ಬರೆದ ಪತ್ರಕ್ಕೆ ಸದರಿ ಕಚೇರಿಯ ಸ್ವೀಕೃತಿ ದಿನಾಂಕ ೨೯/೯/೨೦೨೦ ಎಂದು ಇದೆ. ಅಂದರೆ, ಶಾಸಕರು ಟೆಂಡರ್ ಆದ ಎರಡು ತಿಂಗಳ ಬಳಿಕ ತಮ್ಮ ಕ್ಷೇತ್ರದಲ್ಲಿರುವ ಲಿಂಗಸುಗೂರು ಪಟ್ಟಣದ ೫ ವಾರ್ಡ್‌ಗಳು, ಮುದಗಲ್ ಪಟ್ಟಣದ ಒಂದು ವಾರ್ಡ್ ಕೊಳಚೆ ಪ್ರದೇಶವೆಂದು ಘೋಷಣೆಯಾಗಿದ್ದು, ನಿವೇಶನ ರಹಿತ ಕುಟುಂಬಗಳಿಗೆ ಮನೆಗಳ ನಿರ್ಮಾಣ ಮಾಡಿಕೊಡುವಂತೆ ಕೋರಿದ್ದಾರೆ. ಸಮಯದ ವಿಳಂಬದಿಂದ ಲಿಂಗಸುಗೂರು ಕ್ಷೇತ್ರದ ಕೊಳಗೇರಿ ಪ್ರದೇಶನ ಫಲಾನುಭವಿಗಳು ಮನೆಯಿಂದ ವಂಚಿತರಾಗಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿರುವುದಾಗಿ ಶಾಸಕ ಹೂಲಗೇರಿಯವರು ಹೇಳಿರುವುದು ಸರಿಯಷ್ಟೆ. ಗ್ರಾಮೀಣ ಭಾಗದಲ್ಲಿ ರಸ್ತೆ, ಸಮುದಾಯ ಭವನ ಸೇರಿ ಸರಕಾರದ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಘೋಷಣೆಯಾದ ಕೊಳಗೇರಿಗಳ ಫಲಾನುಭವಿಗಳಿಗೆ ಸಕಾಲದಲ್ಲಿ ಮನೆಗಳ ಮಂಜೂರು ಮಾಡಿಸುವಲ್ಲಿ ಶಾಸಕರ ನಿರ್ಲಕ್ಷ್ಯತನವೇ ಕಾರಣವಾಯಿತೇ? ಎನ್ನುವ ಅನುಮಾನಗಳು ಮಾತ್ರ ಸಾರ್ವಜನಿಕರಲ್ಲಿ ಮೂಡದೇ ಇರದು.