ಟೂಡಾ ಕಾಂಪ್ಲೆಕ್ಸ್ ಸ್ಥಿತಿಗತಿ ಟೂಡಾಕ್ಕೇ ಗೊತ್ತಿಲ್ಲ!

ತುಮಕೂರು, ಏ. ೨೦- ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ(ಟೂಡಾ)ದಿಂದ ಪ್ರಮುಖ ರಸ್ತೆಯಲ್ಲಿ ನಿರ್ಮಿಸಲ್ಪಟ್ಟಿರುವ ಶಾಪಿಂಗ್ ಕಾಂಪ್ಲೆಕ್ಸ್ ಸ್ಥಿತಿಗತಿ ಹೇಗಿದೆ ಎಂಬ ಪ್ರಾಥಮಿಕ ಮಾಹಿತಿಯೂ ಟೂಡಾದಲ್ಲಿ ಇಲ್ಲವೆಂಬ ಅಚ್ಚರಿಯ ಹಾಗೂ ನಿರ್ಲಕ್ಷ್ಯದ ಸಂಗತಿ ಬೆಳಕಿಗೆ ಬಂದಿದೆ.
ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆ ಇದೀಗ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಹೊಂದಿದ್ದು, ನಗರದ ಅತ್ಯಂತ ಪ್ರತಿಷ್ಠಿತ ಹಾಗೂ ಅತ್ಯಧಿಕ ವಾಹನ ಸಂಚಾರದ ರಸ್ತೆಯಾಗಿ ಮಾರ್ಪಟ್ಟಿದೆ. ಇಂತಹುದೊಂದು ರಸ್ತೆಗೆ ಹೊಂದಿಕೊಂಡಂತೆ ಟೂಡಾ ನಿರ್ಮಿಸಿರುವ ಶಾಪಿಂಗ್ ಕಾಂಪ್ಲೆಕ್ಸ್ (ರೋಟಿ ಘರ್ ಸಮೀಪ) ಟೂಡಾ ಸ್ವತ್ತಾಗಿರುವ ಬದಲು, ಖಾಸಗಿಯವರ ಸ್ವಂತ ಆಸ್ತಿ ಎಂಬಂತೆ ಬಳಕೆಯಾಗಿಬಿಟ್ಟಿದೆ. ಅಂದರೆ ಅನೇಕ ಮಳಿಗೆಗಳವರು ಕಟ್ಟಡದಿಂದ ಹೊರಭಾಗಕ್ಕೆ ಸೆಟ್‌ಬ್ಯಾಕ್ ಜಾಗದಲ್ಲಿ ಮನಬಂದಂತೆ ಗ್ರಿಲ್ ಹಾಕಿಕೊಂಡು ಶೀಟ್ ಅಳವಡಿಸಿಕೊಂಡಿದ್ದಾರೆ. ಈ ರೀತಿ ಸರ್ಕಾರಿ ಸ್ವತ್ತಿನಲ್ಲಿ ಸರ್ಕಾರದ ಸೆಟ್‌ಬ್ಯಾಕ್ ನಿಯಮವನ್ನೇ ಗಾಳಿಗೆ ತೂರಿ ಸರ್ಕಾರಿ ಕಟ್ಟಡವನ್ನು ವಿರೂಪಗೊಳಿಸಲಾಗಿದೆ. ಈ ಅಕ್ರಮದ ಬಗ್ಗೆ ನಗರದ ಸಾರ್ವಜನಿಕ ಹೋರಾಟಗಾರ ಆರ್. ವಿಶ್ವನಾಥನ್ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಟೂಡಾ ನೀಡಿರುವ ಉತ್ತರದಲ್ಲಿ ಟೂಡಾದ ನಿರ್ಲಕ್ಷ್ಯ ಬಹಿರಂಗವಾಗಿದೆ.
ಮಾರ್ಚ್ ೧೮ ರಂದು ವಿಶ್ವನಾಥನ್ ಟೂಡಾಕ್ಕೆ ಅರ್ಜಿ ಸಲ್ಲಿಸಿ “ಸದರಿ ಕಾಂಪ್ಲೆಕ್ಸ್‌ನಲ್ಲಿ ಮಳಿಗೆದಾರರು ಮೂಲ ಕಾಂಪ್ಲೆಕ್ಸ್ ಸೌಂದರ್ಯಕ್ಕೆ ಧಕ್ಕೆ ತರುವಂತೆ ಅಕ್ರಮವಾಗಿ ಹೊರಭಾಗ ಮನಬಂದಂತೆ ಅಳವಡಿಸಿಕೊಂಡಿರುವ ಶೀಟ್ ಮೊದಲಾದುವನ್ನು ತೆರವುಗೊಳಿಸಲು ಕೈಗೊಂಡ ಕ್ರಮದ ವಿವರ” ನೀಡುವಂತೆ ಕೋರಿದ್ದರು. ಇದಕ್ಕೆ ಟೂಡಾವು ಏಪ್ರಿಲ್ ೬ ರಂದು ನೀಡಿರುವ ಮಾಹಿತಿ (ನಂ.ಟಿಯುಡಿಎ/ ಮಾ.ಹ. (ವಾಣಿಜ್ಯ ಮಳಿಗೆ) / ೧೫೯/ ೨೦೨೦-೨೧/ ೮೬, ದಿನಾಂಕ ೦೬-೦೪-೨೦೨೧) ಯಲ್ಲಿ “ಲಭ್ಯವಿರುವುದಿಲ್ಲ’ ಎಂದು ಉತ್ತರಿಸಿ ಕೈತೊಳೆದುಕೊಂಡಿದೆ.
ಪ್ರಮುಖ ರಸ್ತೆಯಲ್ಲಿರುವ ಈ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಒಟ್ಟು ೨೦ ಮಳಿಗೆಗಳಿವೆ. ಇವುಗಳಲ್ಲಿ ಕೇವಲ ೮ ಮಳಿಗೆಗಳು ಮಾತ್ರ ಬಾಡಿಗೆಗೆ ನೀಡಲ್ಪಟ್ಟಿದ್ದು, ಉಳಿದ ೧೨ ಮಳಿಗೆಗಳು ಖಾಲಿ ಇವೆ ಎಂದು ಟೂಡಾವು ಅರ್ಜಿದಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದೆ.
ಸದರಿ ೮ ಮಳಿಗೆಗಳಲ್ಲಿ ಬಾಡಿಗೆದಾರರಾದ ಗಂಗಣ್ಣ ಎಂಬುವರಿಗೆ ಸೇರಿದ ೪ ಮಳಿಗೆಗಳಿವೆ. ಮಿಕ್ಕಂತೆ ಹನುಮಯ್ಯ, ಅಮೃತ್‌ಕುಮಾರ್, ಯಮುನಾದೇವಿ ಮತ್ತು ಅನ್ನದಾನಪ್ಪ ಅವರು ತಲಾ ಒಂದೊಂದು ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದಾರೆ. ೮ ಮಳಿಗೆಗಳ ಪೈಕಿ ೬ ಮಳಿಗೆಗಳಿಗೆ ತಲಾ ೩,೮೯೪ ರೂ. ತಿಂಗಳ ಬಾಡಿಗೆ ನಿಗದಿಯಾಗಿದೆ. ಮಿಕ್ಕ ೨ ಮಳಿಗೆಗಳ ಪೈಕಿ ಒಂದಕ್ಕೆ ೪,೦೭೪ ರೂ. ಹಾಗೂ ಮತ್ತೊಂದಕ್ಕೆ ೩,೮೦೯ ರೂ. ತಿಂಗಳ ಬಾಡಿಗೆ ನಿಗದಿಗೊಂಡಿದೆ. ಇದೇ ರೀತಿ ೬ ಮಳಿಗೆಗಳಿಂದ ತಲಾ ೧,೮೩,೦೦೦ ರೂ. ಮುಂಗಡ ಠೇವಣಿ ಸ್ವೀಕೃತವಾಗಿದ್ದರೆ, ಮಿಕ್ಕ ೨ ಅಂಗಡಿಗಳ ಪೈಕಿ ಒಂದರಲ್ಲಿ ೧,೭೩,೦೦೦ ರೂ. ಹಾಗೂ ಇನ್ನೊಂದರಲ್ಲಿ ೧,೭೧,೫೦೦ ರೂ. ಮುಂಗಡ ಠೇವಣಿ ಪಾವತಿಯಾಗಿದೆ ಎಂದು ಟೂಡಾ ವಿವರ ನೀಡಿದೆ. ಎಲ್ಲರೂ ಮೂಲ ಬಾಡಿಗೆದಾರರಾಗಿದ್ದು, ಯಾರೂ ಸಹ ಬಾಡಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ೨೦೧೯ ರ ಡಿಸೆಂಬರ್ ೧೮ ರಂದು ಒಮ್ಮೆ ಹಾಗೂ ೨೦೨೦ ರ ಸೆಪ್ಟೆಂಬರ್ ೨೨ ರಂದು ಮತ್ತೊಮ್ಮೆ ಮಳಿಗೆಗೆ ಸಂಬಂಧಿಸಿದಂತೆ ಹರಾಜು ಪ್ರಕ್ರಿಯೆ ನಡೆಸಿರುವುದಾಗಿ ಟೂಡಾವು ವಿಶ್ವನಾಥನ್ ಅವರಿಗೆ ಮಾಹಿತಿ ನೀಡಿದೆ.