ಟೀಕೆ ಮಾಡದಂತೆ ಟ್ರಂಪ್‌ಗೆ ನಿರ್ಬಂಧ!

ನ್ಯೂಯಾರ್ಕ್, ಅ.೧೭- ೨೦೨೦ರ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಅಮೆರಿಕಾ ಪ್ರಾಸಿಕ್ಯೂಟರ್‌ಗಳು, ನ್ಯಾಯಾಲಯದ ಸಿಬ್ಬಂದಿ ಮತ್ತು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಸಂಭಾವ್ಯ ಸಾಕ್ಷಿಗಳ ಮೇಲೆ ಮೌಖಿಕವಾಗಿ ದಾಳಿ ಮಾಡದಂತೆ ಟ್ರಂಪ್‌ಗೆ ಫೆಡರಲ್ ನ್ಯಾಯಾಧೀಶರು ನಿರ್ಬಂಧ ವಿಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಷಿಂಗ್ಟನ್‌ನಲ್ಲಿರುವ ಯುಎಸ್ ಜಿಲ್ಲಾ ನ್ಯಾಯಾಧೀಶ ತಾನ್ಯಾ ಚುಟ್ಕನ್, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಅವಹೇಳನಕಾರಿಯಾಗಿ ತೋರಿಸುತ್ತಾ, ನಿರಪರಾಧಿ ಎಂದು ಒಪ್ಪಿಕೊಂಡಿರುವ ಮಾಜಿ ಯುಎಸ್ ಅಧ್ಯಕ್ಷರಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಜನರ ವಿರುದ್ಧ ಪೂರ್ವಭಾವಿ ಟೀಕಾ ಅಭಿಯಾನವನ್ನು ಪ್ರಾರಂಭಿಸಲು ತಾನು ಅನುಮತಿಸುವುದಿಲ್ಲ. ಬೇರೆ ಯಾವುದೇ ಕ್ರಿಮಿನಲ್ ಪ್ರತಿವಾದಿಯನ್ನು ಹಾಗೆ ಮಾಡಲು ಅನುಮತಿಸಲಾಗುವುದಿಲ್ಲ ಮತ್ತು ಈ ಪ್ರಕರಣದಲ್ಲಿ ನಾನು ಅದನ್ನು ಅನುಮತಿಸುವುದಿಲ್ಲ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು ನ್ಯಾಯಾಧೀಶರ ಆದೇಶಕ್ಕೆ ಸಹಜವಾಗಿಯೇ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ಅಯೋವಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಟ್ರಂಪ್, ನ್ಯಾಯಾಧೀಶರ ಆದೇಶವನ್ನು ಅಸಂವಿಧಾನಿಕ ಎಂದು ಕರೆದಿದ್ದು, ಅಲ್ಲದೆ ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು. ಜನರನ್ನು ಟೀಕಿಸಲು ಅನುಮತಿ ಇಲ್ಲದ ನಾನು ಏಕೈಕ ರಾಜಕಾರಣಿಯಾಗಿದ್ದೇನೆ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.