ಟೀಕಾಯತ್ ಮೇಲೆದಾಳಿ ಆರೋಪಿಗಳ ಬಂಧನಕ್ಕೆ ಒತ್ತಾಯ

ಕೋಲಾರ,ಏ.೪:ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯಿತ್ ಮೇಲೆ ಗುಂಡಿನ ದಾಳಿ ನಡೆಸಿರುವ ಗೂಂಡಾಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜಸ್ತಾನದ ಆಳ್ವಾರ ಜಿಲ್ಲೆಯಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯಿತ್ ಅವರ ಬೆಂಗಾವಲು ವಾಹನದ ಮೇಲೆ ಬಿಜೆಪಿಯ ಗೂಂಡಾಗಳು ಗುಂಡಿನ ದಾಳಿ ನಡೆಸಿದ್ದು, ಟಿಕಾಯಿತ್ ಅವರನ್ನು ಹತ್ಯೆ ಮಾಡುವ ದುರುದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಕಳೆದ ೪ ತಿಂಗಳಿಂದಲೂ ನಡೆಯುತ್ತಿರುವ ರೈತ ಹೋರಾಟದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಮಾವೇಶಗಳನ್ನು ನಡೆಸುತ್ತಿರುವುದರಿಂದಾಗಿ ಹತಾಶೆಗೊಂಡಿರುವ ಬಿಜೆಪಿ ಗೂಂಡಾಗಳು ಟಿಕಾಯಿತ್‌ರನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ. ಬಿಜೆಪಿ ಗುಂಡಾಗಳು ಗುಂಡಿನ ದಾಳಿ ನಡೆಸುವ ಮೂಲಕ ರೈತ ಹೋರಾಟವನ್ನು ಹತ್ತಿಕ್ಕುವ, ಪ್ರಜಾತಂತ್ರವನ್ನು ಶಿಥಿಲಗೊಳಿಸುವ ದುಸ್ಸಾಹಸ ಮಾಡಿದ್ದು, ಕೇಂದ್ರ ಸರಕಾರ ಈ ರೀತಿಯ ದಾಳಿಗಳನ್ನು ಕೂಡಲೇ ನಿಲ್ಲಿಸಬೇಕು, ಜತೆಗೆ ದಾಳಿ
ಮಾಡಿದ ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆದು, ದಾಳಿಯ ಹಿಂದಿರುವವರನ್ನು ಪತ್ತೆ ಹಚ್ಚಿ ಕಾನೂನು
ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ಮಾಡಿದಲ್ಲಿ ದೇಶದಾದ್ಯಂತ ರೈತಪರ ಸಂಘಟನೆಗಳು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ