ಟೀಕಾಕಾರರಿಗೆ ಸೋನಿಯಾ ಮಾರುತ್ತರ

ನವದೆಹಲಿ, ಅ.೧೬- ಪಕ್ಷದಲ್ಲಿ ಪೂರ್ಣವಧಿ ಅಧ್ಯಕ್ಷರಿಲ್ಲ ಎಂದು ಪಕ್ಷದೊಳಗೆ ರಾಗ ತೆಗೆದು ಆಕ್ಷೇಪಿಸಿದ್ದ ಜಿ-೨೩ ಹಿರಿಯ ನಾಯಕರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ನೂತನ ಅಧ್ಯಕ್ಷರು ಆಯ್ಕೆಯಾಗುವ ತನಕ ನಾನೇ ಪೂರ್ಣಾವಧಿ ಅಧ್ಯಕ್ಷರು ಎಂದು ಸ್ಪಷ್ಟಪಡಿಸಿದ್ದಾರೆ.

ನೇರವಾಗಿ ಮಾತನಾಡುವರನ್ನು ಇಷ್ಟಪಡುತ್ತೇನೆ. ಆದರೆ ಮಾದ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ ಎಂದು ಪರ ವಿರೋದದ ನಾಯಕರ ಪತ್ರಗಳನ್ನು ಪ್ರಸ್ತಾಪ ಮಾಡಿ, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟು ಕಾಪಾಡಿಕೊಳ್ಳಿ,ಮುಂದಿನ ವರ್ಷ ಸೆಪ್ಟಂಬರ್ ಅಂತ್ಯದ ಒಳಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸೋಣ ಎಂದು ಸೂಚಿಸಿದ್ದಾರೆ

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೂತನ ಅಧ್ಯಕ್ಷರ ಆಯ್ಕೆಗಾಗಿ ಎರಡು ಬಾರಿ ದಿನಾಂಕವನ್ನು ನಿಗದಿ ಪಡಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಪಕ್ಷದ ನೂತನ ಅಧ್ಯಕ್ಷರ ಚುನಾವಣೆಯನ್ನು ನಡೆಸುವಂತೆ ಆಗ್ರಹಗಳು ಕೇಳಿಬಂದಿದೆ. ಪಂಜಾಬ್ ಗುಜರಾತ್ , ಉತ್ತರ ಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳ ಚುನಾವಣೆ ಕೆಲವೇ ದಿನಗಳಲ್ಲಿ ಇರುವ ಹಿನ್ನೆಲೆಯಲ್ಲಿ ಅದರ ಬಗ್ಗೆಯೂ ಗಮನ ಹರಿಸಬೇಕಾಗಿದೆ .ಈ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ಮತ್ತು ಸದಸ್ಯತ್ವ ನೊಂದಣಿಗೆ ಆದ್ಯತೆ ನೀಡಿ ಎಂದು ಅವರು ಹೇಳಿದ್ದಾರೆ.

ಜಿ-೨೩ ನಾಯಕರಾದ ಗುಲಾನ್ ನಬಿ ಆಜಾದ್, ಆನಂದ್ ಶರ್ಮಾ ಸೇರಿದಂತೆ ಹಲವರು ಆದಷ್ಟು ಬೇಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಎಂದೂ ಕೂಡ ಆಗ್ರಹಿಸಿದ್ದಾರೆ.

ಶಿಸ್ತು ಕಾಪಾಡಿಕೊಳ್ಳಿ:

ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಶಿಸ್ತು, ಸ್ವಯಂ ನಿಯಂತ್ರಣ ಮತ್ತು ಏಕತೆ ರೂಢಿಸಿಕೊಳ್ಳಲಿ ಆಗ ತಾನಾಗಿಯೇ ಕಾಂಗ್ರೆಸ್ ಪಕ್ಷ ಪುನಶ್ಚೇತನಗೊಳ್ಳಲಿದೆ ಎಂದು ಸೋನಿಯಾ ಗಾಂಧಿ ಅವರು ಒಗ್ಗಟ್ಟಿನ ಮಂತ್ರ ಪಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ತಾವು ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದೇನೆ. ಯಾರು ಏನೇ ಹೇಳಿಕೆ ನೀಡದಿದ್ದರೂ ಪಕ್ಷದ ಹಿತದೃಷ್ಟಿಯಿಂದ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ನೀವೆಲ್ಲ ನಾನು ಅಧ್ಯಕ್ಷರೆಂದು ಭಾವಿಸಿದ್ದರೆ ಮಾತನಾಡಲು ಅವಕಾಶ ಮಾಡಿ ಎಂದು ಪಕ್ಷದ ಪುನರಚನೆ ಮಾಡುವಂತೆ ಪತ್ರ ಬರೆದಿದ್ದ ಹಿರಿಯ ನಾಯಕರಿಗೆ ಮಾರ್ಮಿಕವಾಗಿ ಅವರು ತಿಳಿಸಿದ್ದಾರೆ.

ರೈತರ ಪ್ರತಿಭಟನೆ ,ಕೊರೊನಾ ಸೋಂಕಿನ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಅಗತ್ಯ ಪರಿಹಾರ ನೀಡುವುದು ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಕಾಲಕಾಲಕ್ಕೆ ಪಕ್ಷ ನಿರ್ಣಯ ಕೈಗೊಂಡಿದೆ ಎನ್ನುವ ವಿಷಯವನ್ನು ಸಭೆಯ ಮುಂದಿಟ್ಟಿದ್ದಾರೆ.

ಹಲವು ನೀತಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯುವ ಜೊತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿಯವರು ಸಮಾನ ಮನಸ್ಕ ಪಕ್ಷಗಳ ಜೊತೆಗೂಡಿ ಹೋರಾಟ ಮಾಡಿದ್ದಾರೆ ಎನ್ನುವುದು ನಿಮ್ಮ ನೆನಪಿನಲ್ಲಿರಲಿ ಎಂದು ಅವರು ತಿಳಿಸಿದ್ದಾರೆ

ಪಕ್ಷದ ಪುನರ್ ರಚನೆ:

ಕಾಂಗ್ರೆಸ್ ಪಕ್ಷವನ್ನು ಪುನರ್ ರಚನೆ ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮುಂದಾಗಿದ್ದಾರೆ. ಜೊತೆಗೆ ಆಂತರಿಕ ಚುನಾವಣೆ ನಡೆಸಲು ಸಮ್ಮತಿ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ವರ್ಷದ ಸೆಪ್ಟೆಂಬರ್ ಒಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಪಕ್ಷವನ್ನು ಪುನರ್ ಸಂಘಟನೆಗೆ ಆದ್ಯತೆ ನೀಡೋಣ ಅಲ್ಲದೆ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸೋಣ ಎಲ್ಲರೂ ಒಗ್ಗಟ್ಟಿನಿಂದ ಇರಿ, ಎಂದು ಅವರು ಹೇಳಿದ್ದಾರೆ.

ಕೊರೋನೋ ಸೋಂಕಿನ ಸಮಯದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಹಿರಿಯ ನಾಯಕರಾದ ರಾಹುಲ್ ಗಾಂಧಿ ಎಕೆ ಆಂಟನಿ ,ಮಲ್ಲಿಕಾರ್ಜುನ ಖರ್ಗೆ, ಗುಲಾಮ್ ನಬಿ ಆಜಾದ್, ಅಂಬಿಕಾ ಸೋನಿ, ಪಿ ಚಿದಂಬರಂ , ಕೆಸಿ ವೇಣುಗೋಪಾಲ್ ಸೇರಿದಂತೆ ಜಿ.೨೩ ಹಲವು ನಾಯಕರೂ ಒಳಗೊಂತೆ ಕಾರ್ಯಕಾರಿ ಸಮಿತಿಯ ೫೯ ಸದಸ್ಯರು ಪಾಲ್ಗೊಂಡಿದ್ದರು

ಒಗ್ಗಟ್ಟಿನ ಮಂತ್ರ ಪಡಿಸುವಂತೆ ಸೋನಿಯಾ ಸಲಹೆ

ಪೂರ್ಣಾವಧಿ ಅಧ್ಯಕ್ಷರಾಗುವ ತನಕ ತಾವೇ ಅಧ್ಯಕ್ಷರು

ಪಕ್ಷದ ನಾಯಕರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಲು ಸೂಚನೆ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಹೇಳಿಕೆ

ಪಕ್ಷದ ನಾಯಕತ್ವದ ವಿರುದ್ಧ ತಿರುಗಿಬಿದ್ದಿದ್ದು ಹಿರಿಯ ನಾಯಕರಿಗೆ ಬಹಿರಂಗವಾಗಿ ತಿರುಗೇಟು

ಪಕ್ಷದ ಹಿತದೃಷ್ಟಿಯಿಂದ ಒಗ್ಗಟ್ಟು ಕಾಪಾಡಿಕೊಳ್ಳಲು ಸಲಹೆ

ಮುಂದಿನ ವರ್ಷ ಸೆಪ್ಟೆಂಬರ್ ಒಳಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸಮ್ಮತಿ

ಒಗ್ಗಟ್ಟಿದ್ದರೆ ಗೆಲವು:

ಕೆಲವೇ ತಿಂಗಳಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಎದುರಾಗಲಿದೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪಕ್ಷ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ಗೋವಾ ಮತ್ತು ಮಣಿಪುರ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ.ಈ ಚುನಾವಣೆ ಲೋಕಸಭೆ ಪೂರಕ ಎನ್ನುವುದು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಹೇಳಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿ ಗಳು ತಮ್ಮ ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಪ್ರತ್ಯೇಕವಾಗಿ ವಿವರ ನೀಡಲಿದ್ದಾರೆ ಇಷ್ಟು ಮಾತ್ರ ಹೇಳಬಲ್ಲೆ ಎಲ್ಲರೂ ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.