ಟಿ-೨೦ ವಿಶ್ವಕಪ್ ಭಾರತ-ಪಾಕ್ ಪಂದ್ಯ; ಟಿಕೆಟ್ ಸೋಲ್ಡ್‌ಔಟ್

ಮೆಲ್ಬೋರ್ನ್,ಸೆ.೧೫- ಪ್ರತಿಷ್ಠಿತ ಟಿ-೨೦ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುವ ಪಂದ್ಯಕ್ಕಾಗಿ ಈಗಾಗಲೇ ಎಲ್ಲ ಟಿಕೆಟ್‌ಗಳು ಬಿಸಿ ದೋಸೆಯಂತೆ ಖಾಲಿಯಾಗಿವೆ.
ಆಸ್ಟ್ರೇಲಿಯಾದಲ್ಲಿ ಅ. ೧೬ ರಿಂದ ವಿಶ್ವಕಪ್ ನಡೆಯಲಿದೆ. ಈ ಟೂರ್ನಿಯಲ್ಲಿ ಅ. ೨೩ ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತದ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ರೋಚಕ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಎಲ್ಲ ಟಿಕೆಟ್‌ಗಳನ್ನು ಖರೀದಿಸಿ ಪಂದ್ಯ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸೂಪರ್-೪ ಹಂತದ ಪಂದ್ಯದಲ್ಲಿ ಭಾರತ -ಪಾಕಿಸ್ತಾನದ ವಿರುದ್ಧ ಸೋಲು ಕಂಡಿತ್ತು. ಮೊದಲ ಪಂದ್ಯದಲ್ಲಿ ಭಾರತ ರೋಚಕ ಜಯಗಳಿಸಿತ್ತು. ಟಿ-೨೦ ವಿಶ್ವಕಪ್ ಟೂರ್ನಿಯಲ್ಲಿ ನಡೆಯಲಿರುವ ಈ ಕಾಳಗ ಅಪಾರ ಕುತೂಹಲ ಕೆರಳಿಸಿದೆ.
ಎರಡೂ ತಂಡಗಳ ನಡುವಣ ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇದುವರೆಗೆ ಎಲ್ಲ ಪಂದ್ಯಗಳ ವೀಕ್ಷಣೆಗಾಗಿ ೫ ಲಕ್ಷ ಟಿಕೆಟ್‌ಗಳು ಬಿಕರಿಯಾಗಿವೆ. ೮೨ ರಾಷ್ಟ್ರದ ಕ್ರಿಕೆಟ್ ಪ್ರೇಮಿಗಳು ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಈ ಬಾರಿಯ ಐಸಿಸಿ ಟಿ-೨೦ ವಿಶ್ವಕಪ್ ಟೂರ್ನಿಯಲ್ಲಿ ೧೬ ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿದೆ. ನ. ೧೩ ರಂದು ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ೮೬,೧೭೪ ಜನರು ಟಿಕೆಟ್ ಕಾಯ್ದಿರಿಸಿದ್ದಾರೆ. ದ.ಆಫ್ರಿಕಾ ಮತ್ತು ಬಾಂಗ್ಲಾ ದೇಶದ ನಡುವೆ ನಡೆಯಲಿರುವ ಪಂದ್ಯಗಳು ಈಗಾಗಲೇ ಸೋಲ್ಡ್‌ಔಟಾಗಿವೆ. ಉಳಿದ ಪಂದ್ಯಗಳ ಕೆಲ ಟಿಕೆಟ್‌ಗಳು ಮಾತ್ರ ಬಾಕಿ ಉಳಿದಿವೆ.