ಟಿ-೨೦ಯಲ್ಲಿ ಹೆಚ್ಚು ರನ್ ಗಳಿಸಿದ ರೋಹಿತ್


ಟ್ರಿನಿಡಾಡ್, ಜು. ೩೦- ಚಿನಕುರುಳಿ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ೩೪೬೩ ರನ್ ಬಾರಿಸುವ ಮೂಲಕ ಅತಿಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿನ್ನೆ ಇಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ-೨೦ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಶರ್ಮ ಈ ಸಾಧನೆ ಮಾಡಿದ್ದಾರೆ.
ಇದುವರೆಗೆ ಟಿ-೨೦ ಮಾದರಿಯಲ್ಲಿ ೧೭೯ ಪಂದ್ಯಗಳ ೧೨೧ ಇನ್ನಿಂಗ್ಸ್ ಗಳಲ್ಲಿ ಆಡಿರುವ ಅವರು ೨೭ ಅರ್ಧಶತಕ ಬಾರಿಸಿದ್ದಾರೆ. ಈ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ೪ ಶತಕ ಬಾರಿಸಿದ ಕೀರ್ತಿಗೂ ಶರ್ಮ ಭಾಜನರಾಗಿದ್ದಾರೆ.
ಈ ದಾಖಲೆ ಮಾಡಿದ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ೨ನೇ ಸ್ಥಾನದಲ್ಲಿದ್ದು ೧೧೬ ಪಂದ್ಯಗಳ ೧೧೨ ಇನ್ನಿಂಗ್ಸ್ ನಲ್ಲಿ ೨ ಶತಕ ಹಾಗೂ ೨೦ ಅರ್ಧ ಶತಕ ಬಾರಿಸಿ ೩೩೯೯ ರನ್ ಕಲೆ ಹಾಕಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ೯೯ ಪಂದ್ಯಗಳ ೯೧ ಇನ್ನಿಂಗ್ಸ್ ನಲ್ಲಿ ೩೩೦೮ ರನ್ ಗಳಿಸಿ ೩೦ ಅರ್ಧ ಶತಕ ಬಾರಿಸಿ ೩ನೇ ಸ್ಥಾನದಲ್ಲಿದ್ದಾರೆ.
ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದಲ್ಲಿ ಭಾರತ ೬೮ ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.