(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.1: ಕರ್ನಾಟಕ ಕಾರ್ಯನಿರತ ಪತ್ರ್ರಕರ್ತರ ಸಂಘ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಘ ಕೊಚ್ಚಿನ್ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ನಗರದ ಇತಿಹಾಸ ಸಂಶೋಧಕ ಟಿ.ಹೆಚ್.ಎಂ. ಬಸವರಾಜ ಅವರಿಗೆ ರಾಜ್ಯ ಮಟ್ಟದ “ಇತಿಹಾಸ ಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇತ್ತೀಚಿಗೆ ಕೇರಳದ ಎರ್ನಾಕುಲಂನ ಟೌನ್‍ಹಾಲ್ ನಡೆದ ಕೊಚ್ಚೀನ್ ಕನ್ನಡ ಮತ್ತು ಸಂಸ್ಕೃತಿ ಉತ್ಸವದಲ್ಲಿ ಈ ಪ್ರಶಸ್ತಿ ಕೊಡಮಾಡಿದೆ.
ಕೆಲಕಾರಣದಿಂದ ಪ್ರಶಸ್ತಿ ಸ್ವೀಕರಿಸಲು ಅವರು ಹೋಗದ ಕಾರಣ ಕಾಸರಗೋಡು ಕಾರ್ಯನಿರತ ಪತ್ರಕರ್ತ ಸಂಘದವರು ಬಸವರಾಜ್ ಅವರ ಮನೆಗೆ ಕಳುಹೊಸಿಕೊಟ್ಟಿದ್ದಾರೆ.
ಬಸವರಾಜ ಅವರು ಇತಿಹಾಸ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆಯಂತೆ.
ಬಸವರಾಜ್ ಅವರಿಗೆ ಇಲ್ಲಿಯವರೆಗೆ ಗಡಿನಾಡ ಕೇಸರಿ, ಸುವರ್ಣ ಕನ್ನಡಿಗ, ಕನ್ನಡ ಸಿರಿ, ಬಸವ ಸಿರಿ, ಭಾರ್ಗವ, ಜಾನಪದ ಶ್ರೀ, ಕಲಾಶ್ರೀ, ಡಾ.ಸುಭಾಷ್‍ಭರಣಿ ಪ್ರಶಸ್ತಿ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.
ಇಂದಿಗೂ ಸಹ ಅವರು ಇಂದಿಗೂ ಅವರು ತಮ್ಮ 73ನೇ ವಯಸ್ಸಿನಲ್ಲಿ ಸಾಹಿತ್ಯ, ಜಾನಪದ ಮತ್ತು ಇತಿಹಾಸ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಸಮಾಳ ವಾಧ್ಯವನ್ನು ನುಡಿಸುವುದು ನೋಡಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಗುಡ್ಡ ಬೆಟ್ಟಗಳನ್ನು ಹತ್ತಿ, ಶಾಸನಗಳನ್ನು ಕಂಡು ಹಿಡಿದು ಇತಿಹಾಸ ಸಂಶೋಧನೆ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಸುಮಾರು 25 ಸಂಶೋಧನಾ ಪ್ರಭಂಧಗಳನ್ನು ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷರಾಗಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಂಡಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟಿ ಮತ್ತು ಅನೇಕ ಅಭಿಮಾನಿಗಳು ಪ್ರಶಸ್ತಿ ಪಡೆದಿರುವುದಕ್ಕೆ ಶುಭ ಕೋರಿದ್ದಾರೆ.