ಟಿ.ವಿ,ಮೊಬೈಲ್‍ನಷ್ಟೇ ಅವಶ್ಯಕವಾದುದು ವೈಯಕ್ತಿಕ ಶೌಚಾಲಯ

ಶಹಾಬಾದ,ಜ.18- ಮನೆಗೆ ಟಿ.ವಿ, ಕೈಗೆ ಮೊಬೈಲ್ ಎಷ್ಟು ಅವಶ್ಯಕವೋ ಅಷ್ಟೇ ಅವಶ್ಯಕವಾದದ್ದು ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳುವುದು. ಏಕೆಂದರೆ ನಮ್ಮ ಶೌಚಾಲಯ, ನಮ್ಮ ಸ್ವಾಭಿಮಾನ. ಅದರಲ್ಲಿ ವೈಯಕ್ತಿಕ ಶೌಚಾಲಯ ಹೆಣ್ಣು ಮಕ್ಕಳ ಸಂರಕ್ಷಣೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಮನೆಗೊಂದು ಶೌಚಾಲಯವನ್ನು ಕಟ್ಟಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸಬೇಕೆಂದು ಮಲ್ಲಾಬಾದನ ಸಾಮ್ರಾಟ್ ಅಶೋಕ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮನವಿ ಮಾಡಿಕೊಂಡರು.
ತಾಲೂಕಿನ ಗ್ರಾಮ ಪಂಚಾಯತ ಮರತೂರ ಹಾಗೂ ಮುಲ್ಲಾಬಾದನ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಮರತೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಶೋಕ್ ಪಡಶೆಟ್ಟಿ ಪಂಚಾಯಿತಿ ಅಭಿವೃದ್ಧಿಗಾಗಿ ಸರ್ವ ರೀತಿಯಿಂದಲೂ ಸಹಕರಿಸಲಾಗುವುದೆಂದರು.
ನಂತರ ಒಣಕಸ, ಹಸಿ ಕಸ, ಪರಿಸರ ಸ್ವಚ್ಛತೆ, ಧೂಮಪಾನ,ಮಧ್ಯಪಾನ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳ ಕೊರತೆ, ಮಾನವೀಯ ಮೌಲ್ಯಗಳ ಕೊರತೆ, ಬಾಲ್ಯ ವಿವಾಹ, ವರದಕ್ಷಿಣೆ ನಿಷೇಧ, ಪ್ಲಾಸ್ಟಿಕ್ ಬಳಕೆ ನಿಷೇಧ ಮುಂತಾದ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಜಯ್ ಕುಮಾರ್ ಹಂಚಿನಾಳ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಆಗಾಗ ಶಾಲೆಯಲ್ಲಿ ಹಮ್ಮಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಜ್ಞಾನ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು. ಗ್ರಾಂ.ಪಂ. ಸಿಬ್ಬಂದಿ ವರ್ಗ, ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಎಲ್ಲರೂ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಟೀಕಾರಾವ್ ಮುಂಡರಗಿ ನಿರೂಪಿಸಿ, ವಂದಿಸಿದರು.