ಟಿ. ನಾಗರತ್ನಗೆ ಬಿ.ವಿಮಲಾದಾಸ್ ಸೇವಾ ಪ್ರಶಸ್ತಿ ಪ್ರದಾನ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧: ಜಾಗೃತ ಮಹಿಳಾ ಸಂಘದಿಂದ ನಾಳೆ‌ ೧೧.೩೦ ಕ್ಕೆ ಸಂಘದ ಸಭಾಂಗಣದಲ್ಲಿ ಬಿ. ವಿಮಲಾದಾಸ್ ಸೇವಾ ಪುರಸ್ಕಾರವನ್ನು ನೈಟಿಂಗೇಲ್ ಪ್ರಶಸ್ತಿ ವಿಜೇತೆ ಹೊನ್ನಾಳಿ ಜನರಲ್ ಆಸ್ಪತ್ರೆಯ ದಾದಿ ಟಿ. ನಾಗರತ್ನ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಉಮಾ ವೀರಭದ್ರಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೃತ ಮಹಿಳಾ ಸಂಘದ ರೂವಾರಿಗಳಾದ ಬಿ. ವಿಮಲಾದಾಸ್ ಅವರ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ಬಿ. ವಿಮಲಾದಾಸ್ ಸೇವಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಪ್ರತಿ ವರ್ಷ ಜನಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರನ್ನು ಗುರ್ತಿಸಿ ಪ್ರಶಸ್ತಿ ನೀಡಲಾಗುವುದು. ಕೋವಿಡ್ ವೇಳೆ ತಮ್ಮ ಜೀವದ ಹಂಗು ತೊರೆದು, ದಾಖಲೆ ಪ್ರಮಾಣದಲ್ಲಿ ಲಸಿಕೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಗರತ್ನ ಅವರಿಗೆ ಈ ಬಾರಿಯ ಪುರಸ್ಕಾರವನ್ನು ನೀಡಲಾಗುವುದು ಎಂದರು.ಸAಘದ ಕಾರ್ಯದರ್ಶಿ ಅಮಿನಾ ಬಾನು ಮಾತನಾಡಿ, ಕಾರ್ಯಕ್ರಮವನ್ನು ಅತಿಥಿಗಳಾಗಿ ಆಗಮಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಬಿಐಇಟಿ ನಿರ್ದೇಶಕ ವೈ. ವೃಷಭೇಂದ್ರಪ್ಪ, ಡಿಆರ್‌ಎಂ ಕಾಲೇಜು ನಿವೃತ್ತ ಪ್ರಾಂಶುಪಾಲೆ ಶಕುಂತಲಾ ಗುರುಸಿದ್ದಯ್ಯ ಹಾಗೂ ಎಸ್.ಎಸ್. ವೈದ್ಯಕೀಯ ಕಾಲೇಜು ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ. ಶಶಿಕಲಾ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ.ಇದೇ ವೇಳೆ ಟಿ. ನಾಗರತ್ನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅತಿಥಿಗಳಾಗಿ ನಿವೃತ್ತ ಉಪನ್ಯಾಸಕರಾದ ಶೋ ಬಸವರಾಜ್, ಬಸವರಾಜ್ ಉಪಸ್ಥಿತರಿದ್ದು, ಸಂಘದ ಅಧ್ಯಕ್ಷೆ ಉಮಾ ವೀರಭದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕಿ ಸತ್ಯಭಾಮಾ ಮಂಜುನಾಥ್, ಸಿಬ್ಬಂದಿಗಳಾದ ಸುಮಾ, ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.