ಟಿ ನಟರಾಜನ್‌ 2020ರ ಐಪಿಎಲ್‌ ಟೂರ್ನಿಯ ಹೀರೋ: ಕಪಿಲ್‌ ದೇವ್‌


ನವದೆಹಲಿ, ನ 21 – ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಟಿ ನಟರಾಜನ್‌ ನಿಜವಾದ ‘ಹೀರೋ’ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಯುವ ವೇಗಿಯನ್ನು ಗುಣಗಾನ ಮಾಡಿದ್ದಾರೆ.

18ನೇ ಹಿಂದೂಸ್ಥಾನ್‌ ಟೈಮ್ಸ್ ಲೀಡರ್‌ಶಿಪ್‌ ಶೃಂಗಸೆಭೆಯ ಎರಡನೇ ದಿನ ಪತ್ರಕರ್ತ ಹಾಗೂ ಹಿರಿಯ ಕ್ರೀಡಾ ಬರಹಗಾರ ಅಯಾಝ್‌ ಮೆಮನ್‌ ಜತೆ ಮಾತನಾಡಿದ ಕಪಿಲ್‌ ದೇವ್‌, ಸದಾ ಬದಲಾಗುತ್ತಿರುವ ವೇಗದ ಬೌಲಿಂಗ್‌ನಲ್ಲಿ ನಿಖರವಾದ ಯಾರ್ಕರ್‌ಗಳನ್ನು ಹಾಕಿ ಮೂಲಭೂತ ವಿಷಯಗಳಿಗೆ ಅಂಟಿಕೊಂಡುವ ಮೂಲಕ ತಮಿಳುನಾಡಿನ 29ರ ಪ್ರಾಯದ ವೇಗಿಗೆ ನಾನು ಹೆಚ್ಚು ಪ್ರಭಾವಿತನಾಗಿದ್ದಾನೆಂದು ಹೇಳಿದ್ದಾರೆ.

“ಟಿ. ನಟರಾಜನ್‌ 2020ರ ಐಪಿಎಲ್‌ ಟೂರ್ನಿಯ ಹೀರೋ. ಯುವ ವೇಗಿ ಭಯವಿಲ್ಲದೆ ತುಂಬಾ ಯಾರ್ಕರ್‌ಗಳನ್ನು ಹಾಕಿದ್ದಾರೆ. ಬೌಲಿಂಗ್‌ನಲ್ಲಿ ಯಾರ್ಕರ್‌ ಅತ್ಯುತ್ತಮ ಎಸೆತ. ಇದು ಈಗ ಮಾತ್ರವಲ್ಲ, ಸುಮಾರು 100 ವರ್ಷಗಳಿಂದ ಇದು ವೇಗಿಗಳಿಗೆ ಪ್ರಮುಖ ಅಸ್ತ್ರವಾಗಿದೆ,” ಎಂದು ಭಾರತಕ್ಕೆ 1983ರಲ್ಲಿ ಚೊಚ್ಚಲ ವಿಶ್ವಕಪ್‌ ತಂದುಕೊಟ್ಟ ನಾಯಕ ತಿಳಿಸಿದರು.

ಸನ್‌ರೈಸರ್ಸ್ ಹೈದರಾಬಾದ್‌ ಪರ ಅತ್ಯುತ್ತಮ ಬೌಲಿಂಗ್‌ ಮಾಡಿದ ಟಿ ನಟರಾಜನ್‌ 16 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಅಲ್ಲದೆ ತಮ್ಮ ನಿಯಮಿತ ಯಾರ್ಕರ್‌ಗಳ ಮೂಲಕ ವಿಶ್ವದ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದರು. ಇದಕ್ಕಿಂತ ಮುಖ್ಯವಾಗಿ ಭಾರತ ಟಿ20 ತಂಡಕ್ಕೆ ಮೊದಲ ಬಾರಿ ಅವಕಾಶವನ್ನು ಗಿಟ್ಟಿಕೊಂಡಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಟಿ ನಟರಾಜನ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರ ಅತ್ಯಂತ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದರಲ್ಲೂ ಎಲಿಮಿನೇಟರ್‌ ಹಣಾಹಣಿಯಲ್ಲಿ ಅರ್ಧಶತಕ ಸಿಡಿಸಿ ಆಡುತ್ತಿದ್ದ ಡವಿಲಿಯರ್ಸ್ ಅವರನ್ನು ಯಾರ್ಕರ್‌ ಹಾಕಿ ಕ್ಲೀನ್‌ ಬೌಲ್ಡ್ ಮಾಡಿದ್ದು, ಎಲ್ಲರಿಗೂ ಅಚ್ಚರಿ ತಂದಿತ್ತು.

ತಮಿಳುನಾಡಿನಲ್ಲಿ ಗಲ್ಲಿ ಕ್ರಿಕೆಟ್‌ ಆಡುತ್ತಿದ್ದ ಎಡಗೈ ವೇಗಿ ನಟರಾಜನ್‌ , ಚಿಕ್ಕ ವಯಸ್ಸಿನಲ್ಲಿಯೇ ಯಾರ್ಕರ್‌ ಬೌಲಿಂಗ್‌ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರು. 2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಇದುವರೆಗೂ ಒಟ್ಟು 64 ವಿಕೆಟ್‌ಗಳನ್ನು ಕಬಳಿಸಿದ್ದಾರೆ.