ಟಿ ದಾಸರಹಳ್ಳಿ ಬಳಿ ಸ್ಕೈವಾಕ್ ಸೇತುವೆ ನಿರ್ಮಾಣ ಅತ್ಯಗತ್ಯ..

ಹಾಲನೂರು ಆರ್ ರವೀಶ್

ಟಿ ದಾಸರಹಳ್ಳಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ.೯೦ ರ ದಶಕದಲ್ಲಿ ಅಲ್ಲೊಂದು ಇಲ್ಲೊಂದು ಮನೆಯಿದ್ದ ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಭಾಗ ಬೃಹದಾಕಾರವಾಗಿ ಬೆಳೆದು ನಿಂತಿದೆ.

ಟಿ ದಾಸರಹಳ್ಳಿ ಈ ಭಾಗದ ಜನರಿಗೆ ಒಂದು ರೀತಿಯಲ್ಲಿ ಕೆ ಆರ್ ಮಾರುಕಟ್ಟೆ ಇದ್ದ ಹಾಗೆ.ಇಲ್ಲಿನ ಹೆದ್ದಾರಿ ಪಕ್ಕದ ಮಾರ್ಕೆಟ್ ನಲ್ಲಿ ಎಲ್ಲವೂ ಲಭ್ಯ. ಈ ಭಾಗದಲ್ಲಿ ಕೆಳ ಮತ್ತು ಮಧ್ಯಮ ವರ್ಗದ ಜನರೇ ಅಧಿಕ.ಅದರಲ್ಲೂ ಹಳ್ಳಿ ಪ್ರದೇಶಗಳಿಂದ ಬಂದು ಬದುಕು ಕಟ್ಟಿಕೊಂಡವರೇ ಹೆಚ್ಚು.

ಒಂದು ಕಾಲದಲ್ಲಿ ಆಗೊಂದು ಈಗೊಂದು ವಾಹನ ಹಾದು ಹೋಗುತ್ತಿದ್ದ ಎನ್ ಎಚ್ ೪ ಹೆದ್ದಾರಿಯಲ್ಲೀಗ ಬಿಡುವಿಲ್ಲದೆ ವಾಹನಗಳು ತಿರುಗುತ್ತವೆ.ಬಿಕೋ ಎನ್ನುತ್ತಿದ್ದ ರಸ್ತೆ ಈಗ ಜನಸಂದಣಿಯಿಂದ ಸದಾ ಗಿಜುಗುಡುತ್ತಿರುತ್ತದೆ.ಅತ್ತಿಂದಿತ್ತ ರಸ್ತೆ ದಾಟುವವರ ಪಾಡು ಹೇಳತೀರದು.
ಜೊತೆಗೆ ಈಗ ದಾಸರಹಳ್ಳಿಯಲ್ಲಿ ಮೆಟ್ರೋ ನಿಲ್ದಾಣ ಸಹ ಇದೆ.ಹಾಗಾಗಿ,ದಾಸರಹಳ್ಳಿ ಭಾಗದಲ್ಲಿ ಜನಸಂಖ್ಯೆ ಹೆಚ್ಚಾಗಿದೆ.ನಗರದ ಒಳ ಬಾಗದಲ್ಲಿದ್ದವರೆಲ್ಲಾ ಕಡಿಮೆ ಬಾಡಿಗೆ ಮನೆ ಹಿಡಿದು ಮೆಟ್ರೋದಲ್ಲಿ ಅರಾಮವಾಗಿ ಓಡಾಡಲು ಶುರು ಮಾಡಿದ್ದಾರೆ.

ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬೆಂಗಳೂರಿನಿಂದ ತುಮಕೂರು ಕಡೆ ಹೋಗುವಾಗ ಬಲ ಭಾಗಕ್ಕೆ ಸಿಗುತ್ತದೆ.ಎಡ ಭಾಗಕ್ಕೆ ಎನ್ ಎಚ್ ೪ ಹೆದ್ದಾರಿ.ಮೆಟ್ರೋ ದವರು ರೈಲು ಇಳಿದು ಹೆದ್ದಾರಿ ಎಡ ಭಾಗಕ್ಕೆ ಚೊಕ್ಕಸಂದ್ರ ಕಡೆಗೆ ಹೋಗುವವರಿಗೆ ಯಾವುದೇ ಮೇಲ್ಸೇತುವೆ ಮಾಡಿಲ್ಲ.ಇದರಿಂದಾಗಿ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ.
ಮೆಟ್ರೋ ಇಂದ ಇಳಿದು ಬರುವವರು ಹಾಗೂ ಚೊಕ್ಕಸಂದ್ರ ಕಡೆಯಿಂದ ಮೆಟ್ರೋಗೆ ಹೋಗುವವರು ಹೆದ್ದಾರಿ ದಾಟಿಯೇ ಹೋಗಬೇಕು.ಚೊಕ್ಕಸಂದ್ರ ಸರ್ಕಲ್ ನಲ್ಲಿ ದಾಟಬೇಕು,ಇಲ್ಲಾಂದರೆ ಮೆಟ್ರೋ ಸ್ಟೇಷನ್ ಕೆಳಗೆ ರಸ್ತೆ ದಾಟಬೇಕು.ಇಲ್ಲಿ ಯಾವುದೇ ಸಿಗ್ನಲ್ ಆಗಲಿ ಪೊಲೀಸ್ ಸಹಕಾರ ಆಗಲಿ ಇರೋದಿಲ್ಲ.ಇಲ್ಲಿ ವಾಹನಗಳು ಅತೀ ವೇಗವಾಗಿ ಚಲಿಸುತ್ತಿರುತ್ತವೆ.ಅದನ್ನು ನೋಡಿಕೊಂಡು ರಸ್ತೆ ದಾಟುವಷ್ಟರಲ್ಲಿ ಹೃದಯ ಬಾಯಿಗೆ ಬಂದಿರುತ್ತೆ.ವಯಸ್ಸಾದವರು ಹಾಗೂ ಮಕ್ಕಳಿಗಂತೂ ದಿನವೂ ಒಂದು ಜನ್ಮ ಕಂಡಂತಾಗುತ್ತದೆ.
ಇಲ್ಲಿಯೇ ಎರಡೂ ಕಡೆ ಬಸ್ ನಿಲ್ದಾಣ ಸಹ ಇವೆ.ಬಸ್ ಪ್ರಯಾಣಿಕರು ಸಹ ಅತ್ತಿಂದಿತ್ತ ಹೋಗಬೇಕಾದವರು ಅದೇ ಸರ್ಕಸ್ ಮಾಡಬೇಕು.ಇಲ್ಲೊಂದು ಸ್ಕೈವಾಕ್ ನಿರ್ಮಿಸಬೇಕೆಂದು ಸ್ಥಳೀಯರು ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರಾದರೂ ಯಾವುದೇ ಪ್ರಯೋಜನವಾಗಿಲ್ಲ.

ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಪಾದಚಾರಿಗಳು ರಸ್ತೆ ದಾಟಲು ಸ್ವಲ್ಪ ಓಪನ್ ಇಟ್ಟು ಜೀಬ್ರಾ ಪಟ್ಟಿ ಹಾಕಲಾಗಿದೆ ಆದರೆ,ಇಲ್ಲಿ ಯಾವುದೇ ಸುರಕ್ಷತೆ ಇಲ್ಲ,ವೇಗವಾಗಿ ಬರುವ ವಾಹನಗಳು ರಸ್ತೆ ದಾಟುವವರಿಗೆ ಹೊಡೆದುಕೊಂಡು ಹೋದರೆ ಕೇಳೋರು ಗತಿಯಿಲ್ಲ.ಇಂತಹ ಪರಿಸ್ಥಿತಿಯಲ್ಲಿ ರಸ್ತೆ ದಾಟಲು ಹೆದರಿ ಅನೇಕರು, ಚೊಕ್ಕಸಂದ್ರ ಜಂಕ್ಷನ್ ಬಳಿ ಸಿಗ್ನಲ್ ಬಿದ್ದಾಗ ದಾಟಿಕೊಂಡು ಬರುತ್ತಾರೆ.ಇಂತಹ ಪರಿಸ್ಥಿತಿ ಇಲ್ಲಿಯದು ಎನ್ನುತ್ತಾರೆ ಶಾಲಾ ಶಿಕ್ಷಕಿ ಅನುಪಮ.

ಬೇಡದೆ ಇರೋ ಕಡೆ ಪ್ಲೈಓವರ್,ಸ್ಕೈವಾಕ್ ನಿರ್ಮಿಸ್ತಾರೆ,ಬೇಕಾದ ಕಡೆ ಇರಲ್ಲ.ದಾಸರಹಳ್ಳಿಯಲ್ಲಿ ಬಸ್ ಇಳಿದು ರಸ್ತೆ ದಾಟಬೇಕು ಅಂದರೆ ದೊಡ್ಡ ಸರ್ಕಸ್ ಮಾಡಬೇಕು. ಸಂಬಂಧಪಟ್ಟ ಶಾಸಕರು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯ ವ್ಯಾಪಾರಿ ಜನಾರ್ಧನ ಮನವಿ ಮಾಡುತ್ತಾರೆ.

ಇದು ರಾಷ್ಟ್ರೀಯ ಹೆದ್ದಾರಿ,ಇಲ್ಲಿ ಹೆಚ್ಚು ಸಮಯ ವಾಹನಗಳನ್ನು ತಡೆ ಹಿಡಿದು ಪಾದಚಾರಿಗಳನ್ನು ರಸ್ತೆ ದಾಟಿಸಲು ಸಾಧ್ಯವಿಲ್ಲ.ಪಾದಚಾರಿಗಳು ರಸ್ತೆ ದಾಟುವುದೇ ದೊಡ್ಡ ಸಮಸ್ಯೆ ಆಗಿದೆ.ಆದ್ದರಿಂದ ಇಲ್ಲೊಂದು ಸ್ಕೈವಾಕ್ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಹೆಸರು ಹೇಳ ಬಯಸದ ಸಂಚಾರಿ ಪೊಲೀಸ್ ಪೇದೆ.

ಈ ಭಾಗದಲ್ಲಿ ಹೆದ್ದಾರಿ ಮೇಲ್ಬಾಗದಲ್ಲೇ ಮೆಟ್ರೋ ರೈಲು ಮಾರ್ಗ ಹಾದು ಹೋಗಿರುವುದರಿಂದ ಇಲ್ಲಿ ಪ್ಲೈಓವರ್ ನಿರ್ಮಾಣ ಸಾಧ್ಯವಿಲ್ಲ ಹಾಗಾಗಿ ಸ್ಕೈವಾಕ್ ಸೇತುವೆ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ.ಸ್ಥಳೀಯ ಶಾಸಕ ಆರ್ ಮಂಜುನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮವಹಿಸಬೇಕೆಂದು ಕೋರುತ್ತೇವೆ.ಇದು ಒಂದೆರಡು ದಿನದ ಸಮಸ್ಯೆ ಅಲ್ಲಾ..ಹಾಗಾಗಿ ಈ ಸಮಸ್ಯೆಯನ್ನು ಸ್ಕೈವಾಕ್ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂಬುದು ಸ್ಥಳೀಯ ನಿವಾಸಿಗಳ ಕೋರಿಕೆ.ಈ ಭಾಗದ ನಾಗರಿಕರ ಅಳಲನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.