ಟಿವಿಗಳಲ್ಲಿ ತಿಂಗಳುಗಳಿಂದ ರೇಜಿಗೆ ಹಿಡಿಸುವಂತಹ ಸುದ್ದಿ: ಮಹಿಳಾ ಸಂಘಟನೆಗಳಿಂದ ಇಲ್ಲದ ಪ್ರತಿಭಟನೆ; ಶೈಲಜಾ ಬಾಗೇವಾಡಿ ಬೇಸರ

ಕಲಬುರಗಿ.ಏ.06: ಮಹಿಳೆಯರು ಸಮಯ ಪ್ರಜ್ಞೆ ಬೆಳೆಸಿಕೊಂಡು ನೀರು ಮಿತವಾಗಿ ಬಳಸುವ ಮೂಲಕ ಮಹಿಳೆಯರು ಆಧುನಿಕ ಜೀವನದಲ್ಲಿ ಹೆಚ್ಚು ಜಾಗರುಕರಾಗಿ ಜೀವನ ನಡೆಸಬೇಕೆಂದು ಸಾಹಿತಿ ಹಾಗೂ ಶಹಾಪೂರ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಶ್ರೀಮತಿ ಶೈಲಜಾ ಬಾಗೇವಾಡಿ ಅಭಿಪ್ರಾಯಪಟ್ಟರು.

ನಗರದ ರಾಮಮಂದಿರ ಹತ್ತಿರದ ಸಾಯಿರಾಮನಗರದ ಧರಣಿ ಮಹಿಳಾ ಮಂಡಳಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ಸಬಲೀಕರಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.

ಕಲ್ಬುರ್ಗಿಯಲ್ಲಿ ಬೇಸಿಗೆ ಅತಿ ಬೇಸಿಗೆ ಎರಡೇ ಕಾಲಗಳು ಇರುವುದರಿಂದ ನೀರಿನ ಬಳಕೆ ಮತ್ತು ಮೌಲ್ಯ ಅರಿತು ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದ ಅವರು ನಗರದಲ್ಲಿ ಪುಣ್ಯಕ್ಕೆ ಇನ್ನು ವಿದ್ಯುತ್ ಗೆ ಮೀಟರ್ ಬಂದಂತೆ ನೀರಿಗೆ ಮೀಟರ್ ಬಂದಿಲ್ಲ ಆದ್ದರಿಂದ ನೀರು ಬಳಕೆಯನ್ನು ಬೇಕಾಬಿಟ್ಟಿ ಮಾಡುವಂತಾಗಿದೆ. ಪ್ರಾಯಶಃ ಮೀಟರ್ ಬಂದಾಗ ಜಾಗ್ರುತಿ ಆಗುತ್ತದೆಯೇನೋ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಎಲ್ಲ ಅಂಶಗಳ ಬಗ್ಗೆ ಮಹಿಳೆಯರು ಒತ್ತು ಕೊಟ್ಟು ಜೀವನ ನಡೆಸಬೇಕು, ಸ್ವಾವಲಂಬಿ ಜೀವನ ನಡೆಸಬೇಕು ಮತ್ತು ದಬ್ಬಾಳಿಕೆ ಸಹಿಸಬಾರದು ಇವೆಲ್ಲವನ್ನು ಅರಿತು ಬದುಕು ಸಾಗಿಸಿದಲ್ಲಿ ಮಹಿಳಾ ದಿನ ಮತ್ತು ಮಹಿಳಾ ಸಬಲೀಕರಣ ಆಗುತ್ತದೆ ಎಂದು ಹೇಳಿದರು.

ಚಂದನ ವಾಹಿನಿ ಹೊರತುಪಡಿಸಿ ಟಿವಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ತೋರಿಸುತ್ತಿರುವ ವಿಷಯ ಮಾತ್ರ ರೇಜಿಗೆ ಹಿಡಿಸಿಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮಹಿಳೆ ಸಂತ್ರಸ್ತೆ, ಅಬಲೆ ಮುಂತಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಇದರ ಬಗ್ಗೆ ಯಾವ ಮಹಿಳಾ ಸಂಘಟನೆಗಳು ದನಿ ಎತ್ತುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಶ್ರೀ ಶರಣಬಸವೇಶ್ವರ ವಿಶ್ವ ವಿದ್ಯಾಲಯದ ಡೀನ್ ಶ್ರೀಮತಿ ಲಕ್ಷ್ಮೀ ಪಾಟಿಲ್ ಮಾಕಾ ಮಾತನಾಡಿ ಹೆಣ್ಣು ಮಕ್ಕಳು ಎಲ್ಲ ರಂಗದಲ್ಲಿಯೂ ಮುಂದೆ ಬರುತ್ತಿದ್ದು ಇನ್ನಷ್ಟು ಮುಂದೆ ಬರುವಂತಾಗಲು ಸಂಘಟನೆ ಅಗತ್ಯ ಇಂತಹ ಸಂಘಟನೆಯನ್ನು ಸಾಯಿರಾಮ್ ನಗರದಲ್ಲಿ ಮಾಡುತ್ತಿರುವುದು ಶ್ಲಾಘನೀಯ ಎಂದರು,

ಸಾಮಾಜಿಕ ಹೋರಾಟಗಾರ್ತಿ ಮಾಲಾ ಕಣ್ಣಿ ಮಾತನಾಡಿ ಸಮಾಜ ಉಪಯೋಗಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಅಂದಾಗ ಸಮಾಜ ಸುಧಾರಣೆ ಸಾಧ್ಯ ಎಂದು ಹೇಳಿದರು. ಉದ್ಯಾನವನಗಳು ಅತಿಕ್ರಮಣ ವಾಗುತ್ತಿದ್ದು ಈ ನಿಟ್ಟಿನಲ್ಲಿ ಸಾಯಿರಾಮನಗರದಲ್ಲಿ ಹೋರಾಟ ನಡೆಸುತ್ತಿರುವ ಮಹಿಳೆಯರ ಕಾರ್ಯ ಶ್ಲಾಘನೀಯ ಎಂದರು.

ಕಮಲಾಬಾಯಿ ಹೊಸೂರಕರ್ ಅದ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಗೋಶಾಲೆಯ ಸಂಸ್ಥಾಪಕಿ ಗೀತಾ ಶಿವಯ್ಯ ಮಠ, ಗ್ರಾಪಂ ಸದಸ್ಯೆ ಮಾಲಾಶ್ರೀ, ಸಾಮಾಜಿಕ ಹೋರಾಟಗಾರ್ತಿ ಮಾಲಾ ದೊಣ್ಣೂರ, ಮಹಿಳಾ ಉದ್ಯಮಿ ಅಶ್ವಿನಿ ದೇಸಾಯಿ ಇದ್ದರು. ಧರಣಿ ಮಹಿಳಾ ಸಂಘಟನೆಯ ಸಂಚಾಲಕಿ ಅರುಣಾ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು, ಇನ್ನೋರ್ವ ಸಂಚಾಲಕಿ ಜ್ಯೋತಿ ಪಾಟೀಲ್, ಎಸ್.ಯು.ಸಿ.ಐ ನ ಗೌರಮ್ಮ ಇದ್ದರು.

ಇದೇ ವೇಳೆ ಮಹಿಳಾ ಸಬಲೀಕರಣ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.