ಟಿಯುಸಿಐ ಸಂಘಟನೆಗೆ ಶಾಂತಿಯುತ ಹೋರಾಟಕ್ಕೆ ಮನವಿ

ರಾಯಚೂರು.ಸೆ.16- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾರಿಯಲ್ಲಿ ಉಸ್ತುವಾರಿ ಸಚಿವರನ್ನು ಅಡ್ಡಗಟ್ಟಿ ಹೋರಾಟ ಮಾಡುವ ಬದಲು ಭೇಟಿಯಾಗಿ ಸಚಿವರ ಜೊತೆ ಚರ್ಚೆ ಮೂಲಕ ಬೇಡಿಕೆ ಈಡೇರಿಸಲು ಮನವಿ ಮಾಡುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಟಿಯುಸಿಐ ಸಂಘಟನೆಗೆ ಮನವೊಲಿಸುವ ಪ್ರಯತ್ನ ನಡೆಯಿತು.
ಇಂದು ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಆರ್.ಮಾನಸಯ್ಯ ನೇತೃತ್ವದಲ್ಲಿ ಟಿಯುಸಿಐ ಸಂಘಟನೆ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಅವರು ಸುದೀರ್ಘ ಚರ್ಚೆ ನಡೆಸಿ, ಸಚಿವರ ಅಡ್ಡಗಟ್ಟುವ ಪ್ರತಿಭಟನೆ ಕೈಬಿಟ್ಟು ಸಚಿವರಿಗೆ ಮನವಿ ನೀಡುವಂತೆ ಸೂಚಿಸಲಾಯಿತು. ನಂತರ ಸಂಘಟನೆ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಸ್.ಸಿ, ಎಸ್.ಟಿ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಳೆದ ೧೦ ತಿಂಗಳ ಬಾಕಿ ವೇತನ, ವಲಸೆ ಕಾರ್ಮಿಕರಿಗೆ ಸೂಕ್ತ ನೆರವು, ನೋಂದಾಯಿತ ಕಾರ್ಮಿಕರಿಗೆ ಪರಿಹಾರ ವಿತರಣೆ, ತುಂಗಭದ್ರಾ ಎಡದಂಡೆ ಕಾಲುವೆ ನೀರು ಸರಬರಾಜಿನ ಕಾರ್ಮಿಕರ ವೇತನ, ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಭತ್ಯೆ ಕಡಿತ, ಹಾಗೂ ಆರ್.ಟಿ.ಪಿ.ಎಸ್. ವೈಟಿಪಿಎಸ್ ಕಾರ್ಮಿಕರ ಬಾಕಿ ವೇತನಗಳ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಸಚಿವರ ಗಮನಕ್ಕೆ ತರಲು ಹೋರಾಟ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ನಾಳೆ ಕಲ್ಯಾಣ ಕರ್ನಾಟಕ ದಿನಾಚರಣೆ ಇರುವುದರಿಂದ ಧ್ವಜಾರೋಹಣ ಮಾಡಲು ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ದಾರಿಯಲ್ಲಿ ಅಡ್ಡಗಟ್ಟಿ ಹೋರಾಟ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ, ಆದ್ದರಿಂದ ನೇರವಾಗಿ ಸಚಿವರ ಜೊತೆ ಮಾತನಾಡಿ ಕಾರ್ಮಿಕರ ಸಮಸ್ಯೆಗಳ ಇತ್ಯಾರ್ಥ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಸಂಘಟನೆ ಮುಖಂಡರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರ್ಗೇಶ್, ಪೊಲೀಸ್ ಅಧಿಕಾರಿಗಳು, ಸಂಘಟನೆ ಮುಖಂಡರಾದ ಕೆ.ಅಮರೇಶ, ಸೇರಿದಂತೆ ಇತರರು ಇದ್ದರು.