ಟಿಬಿ ಮುಕ್ತ ಭಾರತಕ್ಕೆ ಸಂಕಲ್ಪ: ಸೂರ್ಯಕಾಂತ್

ಬೀದರ:ಮಾ.26:ದೇಶವನ್ನು ಟಿಬಿ ರೋಗದಿಂದ ಮುಕ್ತಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ಕಾರ್ಯರೂಪಕ್ಕೆ ಬರಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಹೇಳಿದರು.

ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ ಸಭಾಂಗಣದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಿಬಿ ರೋಗ ಪತ್ತೆ ಹಾಗೂ ಚಿಕಿತ್ಸೆ ನೀಡುವ ಕಾರ್ಯ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿರುವುದರಿಂದಲೇ ಶೇ. 92 ರಷ್ಟು ಸಾಧನೆ ಆಗಿದೆ. ಇದೇನು ಸಣ್ಣ ಸಾಧನೆಯಲ್ಲ ಎಂದು ಸೂರ್ಯಕಾಂತ್ ಹೇಳಿದರು. ಆರೋಗ್ಯ ಸಿಬ್ಬಂದಿ ಜೊತೆಗೆ ಇತರರೂ ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಟಿ.ಬಿ. ರೋಗಿಗಳನ್ನು ದತ್ತು ಪಡೆದು ಚಿಕಿತ್ಸೆಗೆ ನೆರವಾಗಿದೆ. ಕಿಟ್ ಕೊಡಲಾಗಿದೆ. ಆರೋಗ್ಯ ಸಂಬಂಧಿ ಜಾಗೃತಿ ಮೂಡಿಸಲಾಗಿದೆ. ಮುಖ್ಯವಾಗಿ ಕುಷ್ಠರೋಗಿಗಳಲ್ಲಿ ಮಾನಸಿಕ ಬಲ ತುಂಬುವ ಕೆಲಸ ಮಾಡಲಾಗಿದೆ. ಮನಸ್ಸು ಸದೃಢವಾದಲ್ಲಿ ರೋಗ ಗುಣಮುಖವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಹೇಳಿದರು.

ಟಿಬಿ ನಿಯಂತ್ರಣದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯವು ಈ ಸ್ಥಾನ ಪಡೆಯಲು ಜಿಲ್ಲೆಗಳ ಶ್ರಮವೂ ಕಾರಣವಾಗಿದೆ. ವಿಶೇಷವಾಗಿ ಬೀದರ್ ಜಿಲ್ಲೆಯ ಕೊಡುಗೆ ಹೆಚ್ಚಿರಬೇಕು ಎಂದು ಹೇಳಿದರು.

ವೈದ್ಯರು, ಸಂಬಂಧಿಸಿದ ಇಲಾಖೆಯ ಸಿಬ್ಬಂದಿ ಶ್ರಮವೂ ಹೆಚ್ಚಿದೆ. ಸ್ವಂತ ಆರೋಗ್ಯ ಲೆಕ್ಕಿಸದೆ ಆರೋಗ್ಯ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿ ಆರೋಗ್ಯಕ್ಕಾಗಿ ಸಾರ್ವಜನಿಕರು ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಾಣದ ಹಂಗು ತೊರೆದು ಸಾರ್ವಜನಿಕರ ಜೀವ ರಕ್ಷಿಸಲು ಶ್ರಮಿಸಿದ್ದರು ಎಂದು ಸ್ಮರಿಸಿದರು.

ಟಿಬಿಯಿಂದಲೂ ದೊಡ್ಡ ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿವೆ. ಇಡೀ ವಿಶ್ವದಲ್ಲಿ ಎಲ್ಲಕ್ಕೂ ಅಧಿಕ ರೋಗಿಗಳು ಭಾರತದಲ್ಲಿದ್ದಾರೆ. ಇದೊಂದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿಯವರು ಟಿಬಿ ಮುಕ್ತ ಭಾರತಕ್ಕೆ ಕರೆ ನೀಡಿದ್ದಾರೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ಟಿಬಿ ಮುಕ್ತ ಭಾರತ ನಿರ್ಮಾಣವಾಗಬಲ್ಲದು ಎಂದರು.

ಟಿಬಿ ರೋಗಿಗಳನ್ನು ದತ್ತು ಪಡೆದ ಮತ್ತು ಚಿಕಿತ್ಸೆಗೆ ನೆರವಾದ ಹಿನ್ನೆಲೆಯಲ್ಲಿ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಅವರನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸನ್ಮಾನಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ರತಿಕಾಂತ ಸ್ವಾಮಿ,

ಬ್ರಿಮ್ಸ್ ನೋಡಲ್ ಅಧಿಕಾರಿ ಡಾ. ಮಹೇಶ ತೊಂಡಾರೆ, ಕ್ಷಯರೋಗದ ರೋಗಿಗಳಿಗೆ ದತ್ತು ಪಡೆದ ದಾನಿಗಳಾದ ಗ್ರಾಮ ಪಂಚಾಯತ ಸದಸ್ಯ ದೇವೆಂದ್ರ ಹುಲಸೂರ, ಶಿವಯ್ಯ ಸ್ವಾಮಿ, ಮೋಹನ ಗಾದಾ, ಬೀದರ ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟ್ಟಕಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ, ಶ್ವಾಸಕೋಶ ಶಾಸ್ತ್ರಜ್ಞ ಡಾ. ಯೊಗೇಶ ಕಾಮಶೆಟ್ಟಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶರಣಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.