
ಮಂಡ್ಯ: ಮಾ.19:- ಟಿಪ್ಪುವನ್ನು ಮಂಡ್ಯ ಜಿಲ್ಲೆಯ ಉರಿಗೌಡ ಮತ್ತು ದೊಡ್ಡನಂಜೇಗೌಡ ಕೊಂದಿದ್ದಾರೆ ಎಂಬ ಹೆಸರನ್ನು ಪ್ರಸ್ತಾಪಿಸಿ ಕೆಲವರು ಮಂಡ್ಯ ಸಂಸ್ಕೃತಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ‘ಜನಪರ್ಯಾಯ ಕರ್ನಾಟಕ’ ವತಿಯಿಂದ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಐತಿಹಾಸಿಕ ಪಾರಂಪರಿಕ ಹಿನ್ನೆಲೆಯುಳ್ಳ ಮಂಡ್ಯದ ಜನ ಉದಾರ ಕೊಡುಗೈ ದಾನಿಗಳಾಗಿದ್ದಾರೆ. ಸಂಕ್ರಾಂತಿ ಸುಗ್ಗಿಯ ಸಮಯದಲ್ಲಿ ಎಲ್ಲಾ ವರ್ಗದ ಜನರಿಗೆ ಒಕ್ಕಲಿಗರು ಧಾನ್ಯ ದಾನ ಮಾಡುವ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ.ಇಂತಹ ಜನರ ಜಾತಿಯ ಹೆಸರನ್ನು ಬಳಸಿಕೊಂಡು ಮೂರನೇ ದರ್ಜೆ ರಾಜಕಾರಣ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಎಲ್ಲ ಐತಿಹಾಸಿಕ ಕೃತಿಗಳಲ್ಲಿ ಟಿಪ್ಪು ಗುಂಡೇಟಿನಿಂದ ಮರಣ ಹೊಂದಿದ್ದಾನೆ ಎನ್ನಲಾಗಿದೆಯೇ ಹೊರತು ಕತ್ತಿ ಅಥವಾ ಚೂರಿಯ ಇರಿತದಿಂದ ಮರಣ ಹೊಂದಿದ್ದಾನೆ ಎಂಬ ಯಾವ ದಾಖಲೆಗಳೂ ಇಲ್ಲ. ಟಿಪ್ಪುವಿನ ಕಾಲದಲ್ಲಿ ಹಾಗೂ ಮೈಸೂರಿನ ಅರಸರ ಕಾಲದಲ್ಲಿ ಇದ್ದ ದಿವಾನ್ ಪೂರ್ಣಯ್ಯನವರ ಇತಿಹಾಸದಲ್ಲೂ ಉರಿಗೌಡ ನಂಜೇಗೌಡರ ಪ್ರಸ್ತಾಪವಿಲ್ಲ.ಇಡೀ ಜಗತ್ತಿಗೆ ಇತಿಹಾಸ ಪ್ರಜ್ಞೆ ಕಲಿಸಿದವರು ಬ್ರಿಟಿಷರು.ಪ್ರಸಿದ್ಧ ಲೇಖಕ ವಿಲಿಯಂ ಡಾಲ್ರಿಂಪಲ್ ಅವರ ‘ದಿ ಅನಾರ್ಕಿ’ ಕೃತಿಯಲ್ಲಾಗಲಿ, ಬುಕನನ್ ವರದಿಗಳಲ್ಲಾಗಲಿ ದಾಖಲಾಗಿಲ್ಲ.ಇತಿಹಾಸದಲ್ಲಿ ಇಲ್ಲದ ವಿಷಯ ಈಗ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಯಾವುದೇ ರಾಜಕೀಯ ಪಕ್ಷಗಳು ಜಾತಿ ಧರ್ಮದ ಹೆಸರಿನಲ್ಲಿ ನೀತಿಗೆಟ್ಟ ಮೂರನೇ ದರ್ಜೆ ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದಕ್ಕೆ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲ.ಮಂಡ್ಯ ಜನ ಇಂತಹುದಕ್ಕೆ ಮಣೆ ಹಾಕುವುದಿಲ್ಲ.ಎಲ್ಲ ಧರ್ಮದ ಜನ ಅಣ್ಣತಮ್ಮಂದಿರಂತೆ ಬದುಕಿದ್ದೇವೆ. ಟಿಪ್ಪುವನ್ನು ಕೊಂದಿದ್ದಾರೆ ಎಂಬ ಕಿರೀಟ ಬೇಕಾಗಿಲ್ಲ. ಕೊಂದು ಆಳುವ,ಒಡೆದು ಆಳುವ ಮನೋಭಾವ ನಮ್ಮಲ್ಲಿಲ್ಲ.ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಸೀಳಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಕೋಡಂಗಿ ಚರ್ಚೆಗೆ ಬರಲಿ:
ಅಧಿಕೃತ ದಾಖಲೆಗಳಿಲ್ಲದೆ ಯಾವುದೇ ವಿಷಯವನ್ನು ಮಾತನಾಡಬಾರದು.ಟಿಪ್ಪು ನಿಜಕನಸುಗಳು ಕೃತಿ ರಚಿಸಿರುವ ಕೊಡಗಿನ ಕೋಡಂಗಿ ಸಾರ್ವಜನಿಕ ಚರ್ಚೆಗೆ ಬರಲಿ.ನಾನು ಸಹ ದಾಖಲೆಗಳ ಸಮೇತ ಬರುತ್ತೇನೆ ಎಂದು ಅಡ್ಡಂಡ ಕಾರ್ಯಪ್ಪ ಅವರ ಹೆಸರೇಳದೆ ಛೇಡಿಸಿದರು.ಇದರಲ್ಲಿ ಸೋತರೆ ತಲೆ ಮೀಸೆ ಬೋಳಿಸಿಕೊಂಡು ಕತ್ತೆಯ ಮೇಲೆ ಮೆರವಣಿಗೆ ಮಾಡಲಿ ಎಂದು ಸವಾಲು ಹಾಕಿದರು. ರಂಗಾಯಣ ನಿರ್ದೇಶಕರ ಅವಧಿ ಮುಗಿದಿದ್ದರೂ ಮುಂದುವರೆಸಿರುವುದೇಕೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರಗೋಡು, ಉಗ್ರನರಸಿಂಹೇಗೌಡ, ಎಂ.ವಿ.ಕೃಷ್ಣ, ಅಭಿರುಚಿ ಗಣೇಶ್ ಹಾಗೂ ಜಗದೀಶ್ ಹಾಜರಿದ್ದರು.