ಟಿಪ್ಪು ಸುಲ್ತಾನ್ ಫಲಕ ತೆರವುಗೊಳಿಸದಿದ್ದರೆ ಪ್ರಧಾನಿ ಭೇಟಿಗಾಗಿ ಮಳಖೇಡ್ ಚಲೋ

ಕಲಬುರಗಿ, ಜ.16: ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರು ಅಕ್ರಮವಾಗಿ ಹಾಕಲಾಗಿರುವ ಟಿಪ್ಪು ಸುಲ್ತಾನ್ ಫಲಕವನ್ನು ಕೂಡಲೇ ತೆರವುಗೊಳಿಸದೇ ಹೋದಲ್ಲಿ ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಮಳಖೇಡ್ ಚಲೋ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಹಿಂದೂ ಜಾಗೃತಿ ಸೇನೆಯ ಕಾಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್ ಚೊಕ್ ಅವರು ಎಚ್ಚರಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉರ್ದು ಪ್ರಾಥಮಿಕ ಶಾಲೆಯ ಎದುರುಗಡೆ ಯಾವುದೇ ಅನುಮತಿ ಇಲ್ಲದೇ ಟಿಪ್ಪು ನಾಮಫಲಕವನ್ನು ಕೆಲವು ಮತೀಯರು ಕೋಮು ಗಲಭೆಗೆ ಸಲುವಾಗಿ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲ್ಲೂಕಿನ ತಹಸಿಲ್ದಾರ್ ಅವರಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 2022ರ ಡಿಸೆಂಬರ್ 15ರವರೆಗೆ ಅನಧಿಕೃತ ನಾಮಫಲಕ ತೆರವಿಗಾಗಿ ಗಡುವೂ ಸಹ ನೀಡಲಾಗಿತ್ತು. ಯಾವುದೇ ಪ್ರತಿಫಲ ದೊರಕಿಲ್ಲ. ಗ್ರಾ, ಪಂಚಾಯಿತಿ ವತಿಯು ಸಹ ಅನಧಿಕೃತ ಫಲಕ ತೆರವಿಗಾಗಿ 24 ಗಂಟೆಗಳ ಗಡುವು ನೀಡಿದ್ದರೂ ಸಹ ನಾಮಫಲಕ ತೆರವುಗೊಳಿಸಿಲ್ಲ ಎಂದು ಅವರು ದೂರಿದರು.
ಅನಧಿಕೃತ ಫಲಕ ತೆರವಿಗಾಗಿ ಗ್ರಾಮ ಪಂಚಾಯಿತಿಯು ಹಮಿದಮಿಯ್ಯ ತಂದೆ ಬಾಬುಮಿಯ್ಯ ಸುಲೇಗಾಂವ್, ಖಾಸಿಂ ಅಲಿ ತಂದೆ ಮಹೆಬೂಬಸಾಬ್ ಮಸಾಲದಾರ್ ಅವರಿಗೆ ಗಡುವು ನೀಡಿದ್ದರೂ ಸಹ ಅವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಎರಡು ದಿನಗಳಲ್ಲಿ ಅನಧಿಕೃತ ಫಲಕ ತೆರವುಗೊಳಿಸದೇ ಹೋದಲ್ಲಿ ಮಳಖೇಡಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೇ ಶಾಲೆಯ ಆವರಣದಲ್ಲಿರುವ ಗವಿಸಿದ್ದೇಶ್ವರ್ ಗುಹೆಯಲ್ಲಿ ಪೂಜೆ ಸಲ್ಲಿಸಿ ಲಿಂಗ ಪ್ರತಿಷ್ಠಾಪಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುರುಗಯ್ಯ ಪುರಾಣಿಕ್, ದಲಿತ ಸೇನೆಯ ಗ್ರಾಮ ಘಟಕದ ಅಧ್ಯಕ್ಷ ಸಚಿನ್ ನೂಂಗಾರಿ, ಬಸವರಾಜ್ ತಳವಾರ್ ಮುಂತಾದವರು ಉಪಸ್ಥಿತರಿದ್ದರು.