ಟಿಪ್ಪು ಪುಸ್ತಕ, ನಾಟಕದ ವಿರುದ್ಧ ದೂರು: ಇಬ್ರಾಹಿಂ

ಮೈಸೂರು: ನ.17:- ಟಿಪ್ಪುವಿನ ಕುರಿತು ಕೆಟ್ಟದಾಗಿ ಬಿಂಬಿಸಿ ಬರೆದಿರುವ ಹಾಗೂ ಅದನ್ನು ನಾಟಕ ರೂಪದಲ್ಲಿ ಹೊರ ತರುತ್ತಿರುವುದರ ವಿರುದ್ಧ ಕಾನೂನು ಹೋರಾಟಕ್ಕೆ ಈಗಾಗಲೇ ಮೈಸೂರಿನಲ್ಲಿ ದೂರು ದಾಖಲಿಸಿದ್ದು, ನಾಳಿದ್ದು ಬೆಂಗಳೂರಿನಲ್ಲೂ ದಾಖಲು ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಸಾಂಸ್ಕೃತಿಕ ನಗರಿ, ವಿದ್ಯಾನಗರಿಯಾಗಿದೆ. ಸಂಸದ ಪ್ರತಾಪಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾನೆ. ಟಿಪ್ಪು ಪುಸ್ತಕ, ನಾಟಕ ಆಕ್ರೋಶಕ್ಕೆ ಕಾರಣವಾಗಿದೆ. ಗಲಾಟೆಗಳು ನಡೆಯಬಾರದು ಎಂದು ಸಭೆ ನಡೆಸಿದ್ದೇನೆ.
ಪುಸ್ತಕದಲ್ಲಿ ಟಿಪ್ಪುನಿನ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ. ನಮ್ಮ ದರ್ಮ ಗುರುಗಳ ಜತೆಗೆ ಚರ್ಚಿಸಿ ಒಂದು ದೂರು ದಾಖಲಿಸಿದ್ದು, ಮತ್ತೊಂದು ಬೆಂಗಳೂರಿನಲ್ಲಿ ಶೀಘ್ರದಲ್ಲೇ ದಾಖಲಿಸಲಾಗುವುದು. ಶೃಂಗೇರಿ ಶಾರದಪೀಠವನ್ನ ಪುನರ್ ನಿರ್ಮಿಸಿರುವುದು ಟಿಪ್ಪು ಎಂದು ಗುರುಗಳೇ ಹೇಳಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದಂತೆ ಈ ರೀತಿ ಮಾಡುತ್ತಿದ್ದಾರೆ. ಎರಡು ಸಮಾಜದ ಮಧ್ಯೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಾಪ ಸಿಂಹ ಯಾವುದೇ ಅಭಿವೃದ್ಧಿ ಕೆಲಸಗಳನ್ನ ಮಾಡಿಲ್ಲ. ಹೀಗಾಗಿ ಅನಗತ್ಯ ವಿಚಾರಗಳ ಮುನ್ನಲೆಗೆ ತರುತ್ತಿದ್ದಾನೆ. ನಂಜುಂಡನಿಗೆ ಕೊಟ್ಟ ಪಂಚ ವಜ್ರ ಟಿಪ್ಪು ಸುಲ್ತಾನ್ ಕೊಟ್ಟಿದ್ದು, ಇದನ್ನ ಪ್ರತಾಪಸಿಂಹ ವಾಪಸ್ ಹಿಸ್ಕೊತ್ತಾನಾ?, ಮೋದಿ ನಿಂತು ಭಾಷಣ ಮಾಡುವ ಕೆಂಪು ಕೋಟೆಯನ್ನ ಷಹಜಹಾನ್ ಕಟ್ಟಿಸಿದ್ದು, ಅಲ್ಲಿ ನಿಂತು ಯಾಕೆ ಬಾಷಣ ಬಿಗಿತೀರಿ. ಅದನ್ನು ಪ್ರತಾಪಸಿಂಹ ಅದನ್ನು ಒಡೆಸಿಬಿಡುತ್ತಾನಾ?. ಟಿಪ್ಪು ದೇಶದ್ರೋಹಿಗಳನ್ನು ಕೊಂದಿದ್ದಾನೆ. ಅಂದಿನ ದೇಶದ್ರೋಹಿ ಸಂತತಿಗಳು ಇಂದಿಗೂ ಇವೆ. ಆದರೆ, ಇವರ ಪುಸ್ತಕದಲ್ಲಿ ಒಕ್ಕಲಿಗರ ಹೆಸರು ಮುನ್ನಲೆಗೆ ತಂದು ನಮ್ಮ ಗೌಡರ ಮಧ್ಯೆ ವಿಷ ಬೀಜ ಭಿತ್ತುತ್ತಿದ್ದಾರೆ. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಎಚ್‍ಡಿಕೆಯನ್ನು ಸಿಎಂ ಮಾಡಿ ದೇಶದಲ್ಲಿ ಮುಸ್ಲಿಂ-ಗೌಡರು ಅಣ್ಣತಮ್ಮಂದಿರಂತೆ ಇರುವಂತಹ ಯೋಜನೆಗಳ ಮೂಲಕವೇ ಉತ್ತರ ನೀಡುತ್ತೇವೆಂದು ತಿಳಿಸಿದರು.
ದೆಹಲಿ ಯುವತಿ ಕೊಲೆ ಪ್ರಕರಣ ಲವ್ ಜಿಹಾದ್‍ಗೆ ತಿರುಗಿದ ವಿಚಾರವಾಗಿ ಪ್ರತಿಕ್ರಯಿಸಿ, ಪ್ರಮೋದ ಮುತಾಲಿಕ್‍ಗೆ ಲವ್ ಮಾಡಿ ಗೊತ್ತಿಲ್ಲ. ಮೊದಲು ಲವ್ ಮಾಡಿ ಟೇಸ್ಟ್ ನೋಡಲು ಹೇಳಿ. ಚರ್ಚೆಯಾಗಬೇಕಿರುವ ವಿಚಾರಗಳು ಸಾಕಷ್ಟು ಇದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಟಿಪ್ಪು ವಿಶ್ವವಿದ್ಯಾಲಯವನ್ನ ಕೋಲಾರ, ಶ್ರೀರಂಗಪಟ್ಟಣದಲ್ಲಿ ಮಾಡುತ್ತೇವೆ. ಕೆಂಪೇಗೌಡ ವಿಶ್ವ ವಿದ್ಯಾನಿಲಯ ಮಾಡುತ್ತೇವೆ. ಇನ್ನು ಆರು ತಿಂಗಳು ತಡೆಯಿರಿ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗ್ತಾರೆ, ಇಂಥಾ ಅಹಿತಕರ, ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತಾರೆ ಎಂದರು.
ಪರಿಸ್ಥಿತಿ ಬದಲಾಗಿದೆ ಅಂತಾ ಧರ್ಮ ಬದಲಾಯಿಸಲು ಆಗುತ್ತಾ?, ರಾಜಕೀಯ ಕಾರಣಗಳಿಂದ ಧರ್ಮ ಬದಲಾಯಿಸಲು ಆಗಲ್ಲ. ರಾಜಕಾರಣ ಇವತ್ತು ಇರುತ್ತೇ ನಾಳೆ ಸಾಯುತ್ತೇ ನಮಗೆ ಧರ್ಮನೇ ಮುಖ್ಯ. ಟಿಪ್ಪು ಪ್ರತಿಮೆ ಸ್ಥಾಪನೆ ಪ್ರಶ್ನೆಯೇ ಇಲ್ಲ. ಪ್ರತಿಮೆಗೆ ನಮ್ಮಲ್ಲಿ ಅವಕಾಶವೇ ಇಲ್ಲ. ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ. ಬಡವರಿಗೆ ಸಹಾಯ ಮಾಡುವುದು ನಮ್ಮಲ್ಲಿರುವುದು. ಇದೇ ನಮ್ಮಲ್ಲಿರುವ ಆಚರಣೆ, ಎಲ್ಲಿಯಾದರೂ ನಮ್ಮ ಪ್ರತಿಮೆ ಇರುವುದನ್ನ ತೋರಿಸಿ. ತನ್ವೀರ್ ಸೇಠ್‍ಗೆ ಏನೂ ಗೊತ್ತಿಲ್ಲ. ಅವರ ತಂದೆ ಅಜೀಜ್ ಸೇಠ್ 50 ವರ್ಷ ಕೆಲಸ ಮಾಡಿದ್ದಾರೆ. ಅವರ ಪ್ರತಿಮೆ ಎಲ್ಲಾದರೂ ಇದೆಯಾ? ಏಕೆ ಹಾಕಿಲ್ಲ. ಟಿಪ್ಪು ಜಯಂತಿ ಮಾಡಿದ್ದು ತಪ್ಪು, ನಮ್ಮಲ್ಲಿ ಜಯಂತಿ ಸಹ ಇಲ್ಲ. ಅದನ್ನು ಮೀರಿ ಟಿಪ್ಪು ಜಯಂತಿ ಮಾಡುವುದಾದರೇ ಅಂದೆ ಶಾರದಪೀಠದ ಶ್ರೀ ಹಾಗೂ ಸುತ್ತೂರು ಶ್ರೀಗಳನ್ನು ಕರೆಸಿ ಟಿಪ್ಪು ಜಯಂತಿ ಮಾಡುವಂತೆ ಸಿದ್ದರಾಮಯ್ಯಗೆ ಹೇಳಿದ್ದೇ ಕೇಳಲಿಲ್ಲ. ಬಿಜೆಪಿ – ಕಾಂಗ್ರೆಸ್ ಟಿಪ್ಪು ಹೆಸರಲ್ಲಿ ರಾಜಕೀಯ ಮಾಡುತ್ತಿವೆ. ನಮಗದರ ಅಗತ್ಯವಿಲ್ಲ ಎಂದರು.