ಟಿಪ್ಪರ್-ಬೈಕ್ ನಡುವೆ ಭೀಕರ ಅಪಘಾತ: ಮೂವರ ದುರ್ಮರಣ

ಮದ್ದೂರು : ಟಿಪ್ಪರ್ ಬೈಕ್ ನಡುವೆ ಸಂಭವಿಸಿ ಭೀಕರ ರಸ್ತೆ ಅಪಘಾತದಲ್ಲಿ ತುಮಕೂರು ಮೂಲದ ಮೂವರು ಸವಾರರು ಮೃತಪಟ್ಟಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ತುಮಕೂರು – ಮದ್ದೂರು ರಾಜ್ಯ ಹೆದ್ದಾರಿಯ ಮಲ್ಲನಾಯಕನಹಳ್ಳಿ ಗೇಟ್ ಬಳಿ ಶುಕ್ರವಾರ ಜರುಗಿದೆ.
ತುಮಕೂರಿನ ನರಸಿಂಹಮೂರ್ತಿ(37), ಲೋಕೇಶ್ (35), ರಮೇಶ್ (32) ಮೃತಪಟ್ಟ ದುರ್ದೈವಿಗಳು.
ತುಮಕೂರಿನಲ್ಲಿ ಖಾಸಗಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮೂವರು ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರಣ ಮನೆ ಖಾಲಿ ಮಾಡಿಕೊಂಡು ಗೂಡ್ಸ್ ವಾಹನದಲ್ಲಿ ಲಗೇಜ್ ತುಂಬಿಕೊಂಡು ಮೈಸೂರಿಗೆ ಮೂವರು ಬೈಕ್‌ನಲ್ಲಿ ತೆರಳುತ್ತಿದ್ದರು.
ಹೀರೋ ಹೊಂಡಾ ಸೈನ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಂಜಾನೆ 5.30ರ ಸುಮಾರಿಗೆ ಹೆದ್ದಾರಿಯಲ್ಲಿ ಮದ್ದೂರು ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.
ಸ್ಥಳಕ್ಕೆ ಧಾವಿಸಿದ ಕೆಸ್ತೂರು ಪಿಎಸ್ ಐ ದಯಾನಂದ ಹಾಗೂ ಸಿಬ್ಬಂದಿಗಳು ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.
ಎಸ್ಪಿ ಡಾ.ಅಶ್ವಿನಿ, ಎಎಸ್ಪಿ ಧನಂಜಯ, ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್ , ಸಿಪಿಎ ಭರತ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತರ ಶವಗಳನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.