ಟಿಟಿಯಲ್ಲಿ ಭಾರತಕ್ಕೆ ಕಂಚು

ಹ್ಯಾಂಗ್‌ಝೌ, ಅ. ೨-ಏಷ್ಯನ್ ಗೇಮ್ಸ್‌ನ ಮಹಿಳೆಯರ ಡಬಲ್ಸ್ ಟಿಟಿ ವಿಭಾಗದಲ್ಲಿ ಭಾರತದ ಐಹಿಕಾ ಮುಖರ್ಜಿಮತ್ತು ಸುತೀರ್ಥ ಮುಖರ್ಜ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿ ಉತ್ತರ ಕೊರಿಯಾದ ಸುಗ್ಯೊಂಗ್ ಪಾಕ್ ಮತ್ತು ಸುಯೊಂಗ್ ಚಾ ವಿರುದ್ಧ ೧೧-೭, ೮-೧೧, ೧೧-೭, ೮-೧೧, ೯-೧೧, ೧೧-೫, ೨-೧೧ ಅಂತರದಲ್ಲಿ ಸೋಲು ಕಂಡು ಮೂರನೇ ಸ್ಥಾನ ಪಡೆದರು. ಸೋಮವಾರ ಭಾರತಕ್ಕೆ ಒಲಿದ ಮೂರನೇ ಪದಕ ಇದಾಗಿದೆ. ಮತ್ತೊಂದೆಡೆ, ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡವು ಕಂಚಿನ ಪದಕದೊಂದಿಗೆ ಖಾತೆ ತೆರೆದಿತ್ತು. ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರನ್ನೊಳಗೊಂಡ ಭಾರತದ ಮಹಿಳಾ ರೋಲರ್ ಸ್ಕೇಟಿಂಗ್ ತಂಡವು ೩೦೦೦ ಮೀಟರ್ ಸ್ಪೀಡ್ ಸ್ಕೇಟಿಂಗ್ ರಿಲೇಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಮಹಿಳಾ ತಂಡ ಕ್ವಾರ್ಟೆಟ್ ೪ ನಿಮಿಷ ಮತ್ತು ೩೪.೮೬೧ ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿತು. ೪ ನಿಮಿಷ ೧೯.೪೪೭ ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚೈನೀಸ್ ತೈಪೆ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾ ೪ ನಿಮಿಷ ೨೧.೧೪೬ ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದುಕೊಂಡಿತು.
ಪುರುಷರ ಸ್ಪೀಡ್ ಸ್ಕೇಟಿಂಗ್ ೩೦೦೦ಮೀ. ರಿಲೇಯಲ್ಲಿ ಕಂಚಿಗೆ ತೃಪ್ತಿಪಟ್ಟಿದೆ. ಆರ್ಯನ್ ಪಾಲ್, ಆನಂದ್ ಕುಮಾರ್, ಸಿದ್ಧಾಂತ್ ಮತ್ತು ವಿಕ್ರಮ್ ಅವರನ್ನೊಳಗೊಂಡ ತಂಡ ೪:೧೦.೧೨೮ ಸೆಕೆಂಡುಗಳಲ್ಲಿ ಓಟವನ್ನು ಮುಗಿಸಿ ಮೂರನೇ ಸ್ಥಾನಿಯಾಯಿತು. ಸೋಮವಾರ ಭಾರತಕ್ಕೆ ಒಲಿದ ಎರಡನೇ ಪದಕ ಇದಾಗಿದೆ.