
ಒಹಾಯೊ (ಅಮೆರಿಕಾ), ಎ.೧೮- ಯುವಜನತೆಯ ನೆಚ್ಚಿನ ತಾಣವಾಗಿರುವ ಟಿಕ್‌ಟಾಕ್ ಪ್ರಹಸನದಿಂದಾಗಿ ಈಗಾಗಲೇ ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಅವಘಡ ಸಂಭವಿಸಿ, ಪ್ರಾಣ ಹಾನಿ ನಡೆಯುತ್ತಲೇ ಇದ್ದು, ಇದೀಗ ಅಮೆರಿಕಾದಲ್ಲಿ ಇದೇ ರೀತಿಯ ದುರಂತ ನಡೆದಿದೆ. ಟಿಕ್‌ಟಾಕ್‌ನಲ್ಲಿ ಬೆನೆಡ್ರಿಲ್ (ಔಷಧಿ) ಚಾಲೆಂಜ್ ನಡೆಸಿದ ೧೩ರ ಹರೆಯದ ಬಾಲಕನೊಬ್ಬ ಇದೀಗ ಓವರ್‌ಡೋಸ್‌ನಿಂದ ಮೃತಪಟ್ಟ ಘಟನೆ ಇಲ್ಲಿನ ಒಹಾಯೊದಲ್ಲಿ ನಡೆದಿದೆ.
ಅಮೆರಿಕಾದಲ್ಲಿ ಟಿಕ್‌ಟಾಕ್‌ನ ಚಾಲೆಂಜ್‌ನಿಂದಾಗಿ ಈಗಾಗಲೇ ಹಲವಾರು ದುರಂತಗಳು ನಡೆದಿದೆ. ಇದೀಗ ಜಾಕೋಬ್ ಸ್ಟೀವನ್ಸ್ ಎಂಬ ೧೩ರ ಹರೆಯದ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆಗೂಡಿ ಭ್ರಮೆ ಉಂಟುಮಾಡಲು ಆಂಟಿಹಿಸ್ಟಾಮೈನ್‌ನ ೧೨ ರಿಂದ ೧೪ ಮಾತ್ರೆಗಳನ್ನು ತೆಗೆದುಕೊಳ್ಳುವ ಚಾಲೆಂಜ್ ಸ್ವೀಕರಿಸಿದ್ದ. ಇದರ ಪರಿಣಾಮ ಗಂಭೀರ ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ, ಒಂದು ವಾರ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಅಂತಿಮವಾಗಿ ಮೃತಪಟ್ಟಿದ್ದಾನೆ. ಸದ್ಯ ಸ್ಟೀವನ್ಸ್ ಸಾವಿನಿಂದಾಗಿ ಪೋಷಕರು ಆಘಾತಕ್ಕೊಳಗಾಗಿದ್ದು, ಬೆನಡ್ರಿಲ್ ಔಷಧ ಖರೀದಿಸಲು ವಯಸ್ಸಿನ ನಿರ್ಬಂಧ ಹೇರುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.
ಏನಿದು ಬೆನಡ್ರಿಲ್ ಚಾಲೆಂಜ್
ಭಾರೀ ಪ್ರಮಾಣದಲ್ಲಿ ಭ್ರಮೆ ಉಂಟು ಮಾಡುವ ಬೆನಡ್ರಿಲ್ (ಆಂಟಿಹಿಸ್ಟಮೈನ್) ಔಷಧಗಳನ್ನು ಸೇವಿಸುವ ಟಾಸ್ಕ್ ಸ್ವೀಕರಿಸುವುದೇ ಬೆನಡ್ರಿಲ್ ಚಾಲೆಂಜ್. ಟಿಕ್‌ಟಾಕ್ ವಿಡಿಯೋ ಮಾಡಿ ಬೆನಡ್ರಿಲ್ ಔಷಧಗಳನ್ನು ಭಾರೀ ಪ್ರಮಾಣದಲ್ಲಿ ಸೇವಿಸಿ, ಭ್ರಮಾಲೋಕಕ್ಕೆ ಹೋಗುವುದೇ ಚಾಲೆಂಜ್‌ನ ಉದ್ದೇಶ. ಈ ರೀತಿಯ ಭ್ರಮಾಲೋಕ್ಕೆ ಹೋದ ಬಳಿಕ ವಿಡಿಯೋ ಮಾಡಿ ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಮಾಡಿ, ಇತತರರನ್ನು ಪ್ರೇರೇಪಿಸಲಾಗುತ್ತದೆ. ಆದರೆ ಈ ರೀತಿ ಓವರ್‌ಡೋಸ್ ಔಷಧ ತೆಗೆದುಕೊಂಡ ಮಕ್ಕಳು ಸೈಡ್ ಎಫೆಕ್ಟ್‌ನಿಂದ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು ದುರಂತ ಸಂಗತಿ.