ಟಿಕ್‌ಟಾಕ್‌ಗೆ ನಿಷೇಧ ಮೊಂಟಾನಾ ಕ್ರಮಕ್ಕೆ ಹಿನ್ನಡೆ

ವಾಷಿಂಗ್ಟನ್, ಡಿ.೧- ಜನವರಿ ೧ರಿಂದ ಅನ್ವಯವಾಗುವಂತೆ ಚೀನಾದ ಟಿಕ್‌ಟಾಕ್‌ಗೆ ನಿಷೇಧ ಹೇರುವ ಅಮೆರಿಕಾದ ಮೊಂಟಾನಾ ರಾಜ್ಯದ ನಿರ್ಧಾರಕ್ಕೆ ಇದೀಗ ತೀವ್ರ ಹಿನ್ನಡೆ ಕಂಡುಬಂದಿದೆ. ಮೊಂಟಾನಾ ರಾಜ್ಯದ ನಿರ್ಣಯಕ್ಕೆ ಅಮೆರಿಕಾದ ಜಿಲ್ಲಾ ನ್ಯಾಯಾಧೀಶ ಡೊನಾಲ್ಡ್ ಮೊಲೊಯ್ ಅವರು ಪ್ರಾಥಮಿಕ ತಡೆಯಾಜ್ಞೆ ನೀಡಿದ್ದಾರೆ. ರಾಜ್ಯದ ನಿರ್ಧಾರವು ಬಳಕೆದಾರರ ಮುಕ್ತ ವಾಕ್ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಮೊಲೊಯ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೊಲೊಯ್, ಮೊಂಟಾನಾ ರಾಜ್ಯದ ನಿರ್ಧಾರವು ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದೆ. ಅಲ್ಲದೆ ಬಳಕೆದಾರರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ. ಆದರೆ ಅಕ್ಟೋಬರ್‌ನಲ್ಲಿ ನಡೆದ ವಿಚಾರಣೆಯ ವೇಳೆ ಟಿಕ್‌ಟಾಕ್ ನಿಷೇಧ ಮಾಡುವ ಮೊಂಟಾನಾ ರಾಜ್ಯದ ಕ್ರಮವನ್ನು ಉಳಿದ ರಾಜ್ಯಗಳು ಏಕೆ ಅನುಸರಿಸಿಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ಆ ರಾಜ್ಯದ ನಿರ್ಣಯಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇನ್ನು ಟಿಕ್‌ಟಾಕ್‌ಗೆ ನಿಷೇಧ ಹೇರಿದ ಮೊಂಟಾನಾ ರಾಜ್ಯದ ವಿರುದ್ಧ ಚೀನಾ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ಸಂಸ್ಥೆ ದೂರು ನೀಡಿತ್ತು. ಇದು ಕಂಪನಿಯ ಮತ್ತು ಅದರ ಬಳಕೆದಾರರ ಮೊದಲ ತಿದ್ದುಪಡಿಯ ಮುಕ್ತ ವಾಕ್ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಟಿಕ್‌ಟಾಕ್ ತನ್ನ ದೂರಿನಲ್ಲಿ ತಿಳಿಸಿತ್ತು. ಬಳಕೆದಾರರ ವೈಯಕ್ತಿಕ ಡೇಟಾ ಮತ್ತು ಸಂಭಾವ್ಯ ಚೀನೀ ಬೇಹುಗಾರಿಕೆಯ ಬಗ್ಗೆ ಕಾಳಜಿಯನ್ನು ಉಲ್ಲೇಖಿಸಿ ಮೊಂಟಾನಾ ರಾಜ್ಯದ ಶಾಸಕಾಂಗವು ಅನುಮೋದಿಸಿದ ನಿಷೇಧವನ್ನು ಸಮರ್ಥಿಸಿಕೊಂಡ ರಾಜ್ಯ ಅಟಾರ್ನಿ ಜನರಲ್ ಅವರ ಕಚೇರಿಯು ಕೋರ್ಟ್ ನಿರ್ಧಾರಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿಲ್ಲ. ಟಿಕ್‌ಟಾಕ್ ಸಂಸ್ಥೆಯು ತನ್ನ ಬಳಕೆದಾರರ ದಾಖಲೆಗಳನ್ನು ಚೀನಾಗೆ ರವಾನಿಸಿ, ಆ ಬಳಕೆದಾರರ ಮೇಲೆ ತೀವ್ರ ಕಣ್ಗಾವಲು ವಹಿಸುತ್ತಿದೆ ಎಂದು ಆರೋಪ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಕೆಲ ವರ್ಷಗಳ ಹಿಂದೆಯೇ ಟಿಕ್‌ಟಾಕ್‌ಗೆ ನಿಷೇಧ ಹೇರಲಾಗಿದೆ.