ಟಿಕೇಟ್ ವಂಚಿತರಿಂದ ಸಭೆ; ಕುಟುಂಬ ರಾಜಕಾರಣಕ್ಕೆ ಬೇಸರ ವ್ಯಕ್ತಪಡಿಸಿದ ಮುಖಂಡರು

ಸಂಜೆವಾಣಿ ವಾರ್ತೆ

ದಾವಣಗೆರೆ, ಮಾ.18: ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಬೇರೆ ಯಾರಿಗೆ ಕೊಟ್ಟರೂ ನಮ್ಮ ಬೆಂಬಲ ಇದೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ನಡೆದ ಟಿಕೆಟ್ ವಂಚಿತ ಬಣದ ನಾಯಕರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.ನಗರದಲ್ಲಿ ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ನಿವಾಸದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ನಡೆದ ಬಿಜೆಪಿ ಮಾಜಿ ಸಚಿವರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಮಾಜಿ ಪದಾಧಿಕಾರಿಗಳ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ಘೋಷಣೆ ಮಾಡಿದ್ದನ್ನು ಹಿಂಪಡೆಯುವಂತೆ ಒಕ್ಕೊರಲಿನಿಂದ ನಾಯಕರು ಒತ್ತಾಯಿ ಸಿದ್ದಾರೆ.ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ತಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ವಿಶೇಷವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಥವಾ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ಪೈಕಿ ಒಬ್ಬರಿಗೆ ನೀಡುವಂತೆ ಹಿಂದಿನಿಂದಲೂ ಒತ್ತಾಯಿಸಿ ಕೊಂಡು ಬಂದರೂ ಪಕ್ಷದ ವರಿಷ್ಟರು ಕಿವಿಗೊಡದ ಹಿನ್ನೆಲೆಯಲ್ಲಿ ಸಂಸದ ಸಿದ್ದೇಶ್ವರ ಪತ್ನಿ ಸೇರಿದಂತೆ ಕುಟುಂಬದ ಯಾರಿಗೆ ಟಿಕೆಟ್ ಕೊಟ್ಟರೂ ನಮ್ಮ ಸಮ್ಮತಿ ಇಲ್ಲ. ತಕ್ಷಣ ಬೇರೆಯವರಿಗೆ ಟಿಕೆಟ್ ನೀಡುವಂತೆ ಸಭೆಯಲ್ಲಿ ಒಕ್ಕೊರಲಿನಿಂದಆಗ್ರಹಿಸಲಾಯಿತು.ಸಭೆಯ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ದಾವಣಗೆರೆ ಕ್ಷೇತ್ರಕ್ಕೆ ಸಂಸದ ಸಿದ್ದೇಶ್ವರ ಸೇರಿದಂತೆ ಆ ಕುಟುಂಬ ಹೊರತುಪಡಿಸಿ, ಬೇರೆ ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುತ್ತೇವೆ. ರಾಜ್ಯ, ರಾಷ್ಟ್ರ ನಾಯಕರು ಯಾವುದೇ ಕಾರಣಕ್ಕೂ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಬಾರದು. ಇದು ನಮ್ಮ ಹೋರಾಟದ ಗುರಿ, ಒತ್ತಾಯವೂ ಆಗಿದೆ ಎಂದರು.ಸಿದ್ದೇಶ್ವರರ ಕುಟುಂಬಕ್ಕೆ ನಾವು ಯಾವುದೇ ರೀತಿ ಬೆಂಬಲ ಕೊಡುವುದಿಲ್ಲ. ನಮ್ಮ ಮುಖ್ಯ ಗುರಿ ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬುದಾಗಿದೆ. ಹಾಗಾಗಿ ದಾವಣಗೆರೆ ಕ್ಷೇತ್ರದಲ್ಲಿ ಈ ಅಭ್ಯರ್ಥಿ ಸೋಲಬಾರದು. ಬೇರೆ ಅಭ್ಯರ್ಥಿಯನ್ನು ದಾವಣಗೆರೆ ಕ್ಷೇತ್ರಕ್ಕೆ ಘೋಷಣೆ ಮಾಡಬೇಕು. ನಮ್ಮ ರಾಜ್ಯ ನಾಯಕರಾಗಲೀ, ರಾಷ್ಟ್ರ ನಾಯಕರಾಗಲೀ ಯಾರೂ ಏನೂ ಹೇಳಲಿಲ್ಲ. ಹಾಗಾಗಿ ನಮ್ಮ ಹೋರಾಟವನ್ನು ನಾವು ಮಾಡುತ್ತೇವೆ. ದುಗ್ಗಮ್ಮನ ಜಾತ್ರೆ ಆದ ನಂತರ ನಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಅವರುತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಮಾ.18ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಆದರೆ, ನಾವ್ಯಾರೂ ಇಲ್ಲಿಂದ ಶಿವಮೊಗ್ಗ ಸಭೆಗೆ ಹೋಗುವುದಿಲ್ಲ. ಒಂದು ವೇಳೆ ಕ್ಷೇತ್ರದಲ್ಲಿ ಸಿದ್ದೇಶ್ವರ ಕುಟುಂಬಕ್ಕೆ ನೀಡಿದ ಟಿಕೆಟ್ ಬದಲಾವಣೆ ಮಾಡದಿದ್ದರೆ, ನಂತರ ಯೋಚಿಸುತ್ತೇವೆ.ಅಭ್ಯರ್ಥಿ ಬದಲಾವಣೆ ಆಗಬೇಕೆಂಬುದೇ ನಮ್ಮ ಮುಖ್ಯ ಅಜೆಂಡಾ ಆಗಿದೆ. ರಾಜಕಾರಣದಲ್ಲಿ ಯಾರ ಎದುರು ಯಾರು ಸೆಡ್ಡು ಹೊಡೆಯುತ್ತಾರೋ ನಮಗೆ ಗೊತ್ತಿಲ್ಲ. ನಮ್ಮ ಪ್ರಶ್ನೆ ಇರುವುದು ಲೋಕಸಭಾ ಸದಸ್ಯರ ಬದಲಾವಣೆ ಆಗಬೇಕು. ಸಂಸದ ಸಿದ್ದೇಶ್ವರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂಬುದೇ ಮುಖ್ಯ ಬೇಡಿಕೆ ಎಂದು ಅವರು ಸ್ಪಷ್ಟಪಡಿಸಿದರು.ಯಡಿಯೂರಪ್ಪ ಬಳಿ ಹೋಗಿ ನಾವ್ಯಾರೂ ಮಾತನಾಡಬೇಕಾಗಿಲ್ಲ. ಮಾತನಾಡುವುದೆಲ್ಲವೂ ಈಗಾಗಲೇ ಮುಗಿದಿದೆ. ಮಾತನಾಡುವುದಕ್ಕೆ ನಾವ್ಯಾರೂ ತಯಾರಿಲ್ಲ. ಇರುವ ವಿಷಯ, ಸಂಸದ ಸಿದ್ದೇಶ್ವರ ನಡವಳಿಕೆ, ಏನೇನು ಮಾತನಾಡುತ್ತಾರೆ, ಕಾರ್ಯಕರ್ತರು,ಜನ ಸಾಮಾನ್ಯರ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ, ಹೇಗೆಲ್ಲಾ ವರ್ತಿಸುತ್ತಾರೆಂಬುದನ್ನೂ ಯಡಿಯೂರಪ್ಪನವರಿಗೆ ಹೇಳಿದ್ದೇವೆ. ನಮ್ಮನ್ನೆಲ್ಲಾ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ ಮನುಷ್ಯ ಸಿದ್ದೇಶ್ವರ ಅಂತಾ ನಮ್ಮೆಲ್ಲಾ ಪರಾಜಿತ ಅಭ್ಯರ್ಥಿಗಳ ಅಪವಾದಆಗಿದೆ. ನಾವೂ ಸಹ ಸಿದ್ದೇಶ್ವರ ಮತ್ತು ಕುಟುಂಬದವರೆ ಮತ್ತೆ ಅಭ್ಯರ್ಥಿಯಾದರೆ ಸರಿಯಾಗುವುದಿಲ್ಲವೆಂದು ನಮ್ಮ ಹೋರಾಟವಿದೆ ಎಂದು ಅವರು ಹೇಳಿದರು.