ಟಿಕೇಟ್ ಗಾಗಿ  ಜಿದ್ದಾಜಿದ್ದಿ… ಕೂಡ್ಲಿಗಿ ಕ್ಷೇತ್ರದಲ್ಲಿ ದಿನಕ್ಕೊಂದು ತಿರುವು, ಕುತೂಹಲ.


ಬಿ. ನಾಗರಾಜ ಕೂಡ್ಲಿಗಿ.
ಕೂಡ್ಲಿಗಿ.ಏ.4 :- ಕೆಟ್ಟ ಮೇಲೆ ಬುದ್ಧಿಬಂತು ಅನ್ನೋಹಾಗೆ ಕ್ಷೇತ್ರದ ಜನತೆಗೆ ಎರಡು ಬಾರಿ ಗೆದ್ದ ನಾಗೇಂದ್ರ ಹಾಗೂ ಒಂದು ಬಾರಿ ಗೆದ್ದ ಗೋಪಾಲಕೃಷ್ಣ ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಬೇಸರ ವ್ಯಕ್ತಪಡಿಸಿಕೊಂಡ ಸ್ಥಳೀಯರು ಈ ಬಾರಿ ಯಾವುದೇ ಪಕ್ಷವಿರಲಿ ಸ್ಥಳೀಯರಿಗೆ ಟಿಕೇಟ್ ಕೊಡಿ ಎನ್ನುವ ಕೂಗು ಬಲವಾಗಿ ಕೇಳಿಬರುತ್ತಿದ್ದು ಟಿಕೆಟ್ ಗಾಗಿ ಹೈಕಮಾಂಡ್ ನಲ್ಲಿ ಫೈಟ್ ಮಾಡುವ ಜೊತೆಗೆ ಕೂಡ್ಲಿಗಿ ಕ್ಷೇತ್ರದಲ್ಲಿ ಟಿಕೇಟ್ ಗಾಗಿ ತೀವ್ರ ಪೈಪೋಟಿ ಜೊತೆಗೆ ಪಕ್ಷಾಂತರ ಪರ್ವದ ಸುಳಿವಿನ ಜೊತೆಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಕುತೂಹಲ ಮೂಡಿಸುತ್ತಿದೆ.
2008ರಲ್ಲಿ ಕೂಡ್ಲಿಗಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ಎಸ್ಟಿ ಮೀಸಲು ಕ್ಷೇತ್ರವಾಗಿದ್ದು ಗಣಿಯ ಆಬ್ಬರ ಜೋರಾಗಿತ್ತು ಅಲ್ಲದೆ ಗಣಿಧಣಿ ರೆಡ್ಡಿಗಳ ಪ್ರಭಾವ ಜೋರಾಗಿದ್ದರಿಂದ ಕೂಡ್ಲಿಗಿ ಕ್ಷೇತ್ರಕ್ಕೆ ಬಿ ನಾಗೇಂದ್ರ ಈಗಿನ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅಂದು ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಕಾಂಗ್ರೇಸ್ ನ ಸ್ಥಳೀಯರಾದ ನರಸಿಂಹಗಿರಿ ವೆಂಕಟೇಶರವರ  ವಿರುದ್ಧ ಎರಡು ಬಾರಿ ಜಯಗಳಿಸಿದ್ದರು ನಂತರ ಕೂಡ್ಲಿಗಿ ಕ್ಷೇತ್ರ ಬಿಟ್ಟು ಬಳ್ಳಾರಿ ಗ್ರಾಮೀಣಕ್ಕೆ ಹೋದ ಬಿ ನಾಗೇಂದ್ರ ಅಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧೆ ನಡೆಸಿ ಶಾಸಕರಾಗಿದ್ದಾರೆ ಆದರೆ ಇತ್ತ ಕೂಡ್ಲಿಗಿ ಕ್ಷೇತ್ರದಲ್ಲಿ ಬಿ ನಾಗೇಂದ್ರ ಬೆಂಬಲಿಗರು ಅತಂತ್ರವಾಗಿದ್ದಂತೂ ನಿಜವಾಗಿದೆ.
ಅದೇ ರೀತಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಾಗಿದ್ದ  ಜೆಡಿಎಸ್ ನಿಂದ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಸ್ಪರ್ಧೆಗಿಳಿದಿದ್ದರು ಪ್ರತಿಸ್ಪರ್ಧೆಗಳಾಗಿ ಮೊಳಕಾಲ್ಮುರು ಮಾಜಿ ಶಾಸಕ ಎನ್ ವೈ ಗೋಪಾಲಕೃಷ್ಣ  ಕಾಂಗ್ರೇಸ್ ನಿಂದ ಟಿಕೇಟ್ ಸಿಗಲಿಲ್ಲವೆಂದು ಬಿಜೆಪಿ ಸೇರಿ ಶ್ರೀರಾಮುಲು ಬಿಜೆಪಿಯಿಂದ ಮೊಳಕಾಲ್ಮುರು ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದರಿಂದ ಇತ್ತ ಕೂಡ್ಲಿಗಿ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಿ ಗೋಪಾಲಕೃಷ್ಣ ಅವರನ್ನು ಕೂಡ್ಲಿಗಿ ಕ್ಷೇತ್ರಕ್ಕೆ ನಿಲ್ಲಿಸಲಾಯಿತು ಅಲ್ಲದೆ ಕಾಂಗ್ರೇಸ್ ಟಿಕೇಟ್ ಬಯಸಿದ್ದ ಲೋಕೇಶ್ ವಿ ನಾಯಕ ಅವರಿಗೆ ಕೈ ಟಿಕೆಟ್ ತಪ್ಪಿ ಗುಜ್ಜಲ್ ರಘುಗೆ  ಕಾಂಗ್ರೇಸ್ ಟಿಕೆಟ್ ಸಿಕ್ಕಿದ್ದರಿಂದ ಮನನೊಂದ ಲೋಕೇಶ ನಾಯಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರಿಂದ  ಕಾಂಗ್ರೇಸ್ ಮತಗಳು ಹಿಬ್ಬಾಗವಾಗಿದ್ದು ಜೆಡಿಎಸ್ ನ ಪ್ರಭಾವ ಕ್ಷೇತ್ರದಲ್ಲಿ ಕಡಿಮೆ ಇದ್ದರು ಮಾಜಿ ಶಾಸಕ ತೀವ್ರ ಪೈಪೋಟಿ ನಡುವೆ ಕ್ಷೇತ್ರಕ್ಕೆ ಹತ್ತು ದಿನದ ಹಿಂದಷ್ಟೇ ಬಂದ ಗೋಪಾಲಕೃಷ್ಣ ಅವರಿಗೆ ಜನ ಜೈ ಎಂದರು ಬಿಜೆಪಿ ಶಾಸಕರಾಗಿ ಗೆಲುವು ಸಾಧಿಸಿ ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದರೂ ಈ ಬಾರಿ ಚುನಾವಣೆಯಲ್ಲಿ ಕೂಡ್ಲಿಗಿಯಿಂದ ಸ್ಪರ್ಧೆಗಿಳಿಯದೆ ಬಿಜೆಪಿ ತೊರೆದು ಕಾಂಗ್ರೇಸ್ ಸೇರಿದ ಗೋಪಾಲಕೃಷ್ಣ ಮೊಳಕಾಲ್ಮುರು ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ಬಳ್ಳಾರಿಯಿಂದ ಬಂದು ಶಾಸಕರಾಗಿ ಮತ್ತೇ ಬಳ್ಳಾರಿಗೆ ಹೋದ  ಬಿ ನಾಗೇಂದ್ರ ಅವರ ಹಾದಿಯನ್ನೇ  ಮೊಳಕಾಲ್ಮುರು ನಿಂದ ಬಂದು ಮತ್ತೇ ಮೊಳಕಾಲ್ಮುರುಗೆ ವಾಪಸ್ಸಾದದ್ದನ್ನು ಕಂಡು ಕ್ಷೇತ್ರದ ಜನತೆ ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದಾರೆ ಅಲ್ಲದೆ ಯಾವುದೇ ಪಕ್ಷವಾದರೂ ಸರಿ ಸ್ಥಳೀಯರಿಗೆ ಟಿಕೆಟ್ ನೀಡಿ ಎನ್ನುವ ಕೂಗು ಮಾತ್ರ ಜೋರಾಗಿದೆ.
ಆದರೂ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಬಂಗಾರು ಹನುಮಂತು, ಕೋಡಿಹಳ್ಳಿ ಭೀಮಣ್ಣ, ರಾಮದುರ್ಗ ಪಾಪಣ್ಣ, ಗುಂಡುಮುಣುಗು ಪ್ರಕಾಶ ಸೇರಿದಂತೆ ಸ್ಥಳೀಯರ ಹತ್ತಕ್ಕೂ ಹೆಚ್ಚು ಮಂದಿ ಪೈಪೋಟಿ ನಡುವೆ ಈಗ ಶ್ರೀರಾಮುಲು ಸಹೋದರಿ ಜೆ.ಶಾಂತ, ಹಾಲಿ ಸಂಸದ ದೇವೇಂದ್ರಪ್ಪ ಅವರ ಪುತ್ರನ  ಹೆಸರು ಬಲವಾಗಿ ಕೇಳಿಬರುತ್ತಿದೆ.
ಇತ್ತ ಕಾಂಗ್ರೇಸ್ ನಲ್ಲಿ ಹತ್ತು ವರ್ಷದಿಂದ ಸೋತರು ನಿರಂತರ  ಸಂಪರ್ಕದಲ್ಲಿ ಕ್ಷೇತ್ರ ಸುತ್ತಾಡುತ್ತಿರುವ ಲೋಕೇಶ ವಿ ನಾಯಕ, ಕಳೆದ ಬಾರಿ ಸೋಲನ್ನು ಕಂಡ ಗುಜ್ಜಲ್ ರಘು, ಏಕೈಕ ಮಹಿಳಾ ಎಸ್ಟಿ ಆಕಾಂಕ್ಷಿ ಜಿಂಕಲ್ ನಾಗಮಣಿ ಸೇರಿದಂತೆ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರ ಪುತ್ರ ಇತ್ತೀಚಿಗಷ್ಟೇ ಜೆಡಿಎಸ್ ತೊರೆದು ಕಾಂಗ್ರೇಸ್ ಸೇರಿ ಆಕಾಂಕ್ಷಿಯಾಗಿ ಕ್ಷೇತ್ರವಾರು ಸುತ್ತಾಡಿ ಜನರಿಗೆ ಕಣ್ಣಿನ ಹಾಗೂ ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಇತರೆ ಕಾರ್ಯ ಮಾಡುವ ಮೂಲಕ ಕ್ಷೇತ್ರದಲ್ಲಿ ಬಹು ಬೇಗ ಹೆಸರು ಮಾಡಿರುವ ನೇತ್ರತಜ್ಞ ಡಾ ಶ್ರೀನಿವಾಸ್ ಸಹ ಕಾಂಗ್ರೇಸ್ ಟಿಕೆಟ್ ಪೈಪೋಟಿಯಲ್ಲಿದ್ದಾರೆ ಅದೃಷ್ಟದ ಬಾಗಿಲು ಯಾರಕಡೆಗಿದೆ ಯಾರಿಗೆ ಕಾಂಗ್ರೇಸ್ ಟಿಕೆಟ್ ಸಿಗುತ್ತದೆ ಎನ್ನುವ ಕುತೂಹಲ ಮಾತ್ರ ಜೋರಾಗಿದೆ. 
ಕಾಂಗ್ರೇಸ್ ಪಟ್ಟಿ ಹೊರಬೀಳುವ ಸಮಯವನ್ನು ಜೆಡಿಎಸ್ ಹಾಗೂ ಜನಾರ್ದನರೆಡ್ಡಿಯ ಕೆ ಆರ್ ಪಿ ಪಕ್ಷಗಳು ಹದ್ದಿನ ಕಣ್ಣಿನಂತೆ ಕಾಯುತ್ತಿವೆ ಟಿಕೆಟ್ ವಂಚಿತರು  ಟಿಕೆಟ್ ಗಾಗಿ ಬೇರೆ  ಪಕ್ಷದ ಕಡೆ ವಾಲುವ ಲಕ್ಷಣಗಳನ್ನು ಅಲ್ಲಗಳೆಯುವಂತಿಲ್ಲ ಪಕ್ಷಾಂತರ ಪರ್ವ ಸಹ ಕ್ಷೇತ್ರದಲ್ಲಿ ಕಾಣಬಹುದಾಗಿದೆ. ಕ್ಷೇತ್ರಕ್ಕೆ ವಲಸೆ ಬಂದು ಹೋದವರ ಬೆಂಬಲಿಗರ ಸ್ಥಿತಿ ಅತಂತ್ರದ ನಡುವೆ ಯಾರಕಡೆ ನಿಲ್ಲಬೇಕು ಇಲ್ಲವೇ ಯಾರಕಡೆ ಗುರುತಿಸಿಕೊಳ್ಳದೆ ಹಾಗೇ ಇರಬೇಕೋ ಎನ್ನುವ ನಿರ್ಧಾರದಲ್ಲಿ ವಲಸಿಗರ ಶಾಸಕರ ಬೆಂಬಲಿಗರ ಪಾಡಾಗಿದೆ ಎಂದು ಹೇಳಬಹುದು.
: ಎರಡು ಬಾರಿ ಗೆದ್ದು ಬಳ್ಳಾರಿಗೆ ಹೋದ ಬಿ ನಾಗೇಂದ್ರ ಹಾಗೂ ಒಂದು ಬಾರಿ ಬಂದು ಮತ್ತೇ ವಾಪಸ್ಸಾದ ಮೊಳಕಾಲ್ಮುರು ಗೋಪಾಲಕೃಷ್ಣ ಇವರ ವಲಸೆ ಬಂದು ಹೋದದ್ದನ್ನು ಕಂಡು ಬೇಸರ ವ್ಯಕ್ತವಾಗುತ್ತಿದ್ದು ಪಕ್ಷದ ಹೈಕಮಾಂಡ್  ಸ್ಥಳೀಯರಿಗೆ ಟಿಕೆಟ್ ನೀಡಿದರೆ ವಲಸೆ ಬಂದು ಹೋಗುವವರು ಕಡಿಮೆಯಾಗಬಲ್ಲರು. — ಬಿಜೆಪಿ ಯುವಮುಖಂಡ ಗುರಿಕಾರ ರಾಘವೇಂದ್ರ, ಜೂಗಲ್ ಭರತ್ ಹಾಗೂ ಇತರರು.

: ಹತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಸುತ್ತಾಡಿ  ಕಾಂಗ್ರೆಸ್ ಪಕ್ಷದ ಪ್ರಮುಖರಾಗಿ ಸಂಘಟಿಸಿ ಕ್ಷೇತ್ರದಲ್ಲಿ ಮನೆಮಾತಾಗಿರುವ ಲೋಕೇಶ ವಿ ನಾಯಕ ಅವರಿಗೆ ಕಾಂಗ್ರೇಸ್ ಟಿಕೆಟ್ ನೀಡಬೇಕು ಎನ್ನುವುದು ನಮ್ಮ ಅಭಿಪ್ರಾಯ — ಕಾಟಮಲ್ಲಿ ಕೊಟ್ರೇಶ, ಬಸವರಾಜ್, ಹಾಗೂ ಇತರರು.
ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರ ಪುತ್ರ ವೃತ್ತಿಯಲ್ಲಿ ನೇತ್ರತಜ್ಞನಾಗಿ ದೆಹಲಿಯ ಪ್ರತಿಷ್ಠಿತ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡು  ತುಮಕೂರಿನಲ್ಲಿ ಕಣ್ಣಿನ ಆಸ್ಪತ್ರೆ ತೆರೆದು ಸಾವಿರರೂ ಅಂಧರ ಪಾಲಿಗೆ ಬೆಳಕಾಗಿ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ದಿವಂಗತರಾದ ನಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಡಾ ಶ್ರೀನಿವಾಸ ಅನೇಕ ಆರೋಗ್ಯ ಶಿಬಿರ ನಡೆಸಿ ಕ್ಷೇತ್ರದಲ್ಲಿ ಮನೆಮಾತಗಿದ್ದಾರೆ ಅಲ್ಲದೆ ಇವರಿಗೆ ಈ ಬಾರಿ ಕಾಂಗ್ರೇಸ್ ನೀಡಬೇಕು — ಮಾರಪ್ಪ, ದಿನಕರ,ಅಮೀರ್ ಹಾಗೂ ಇತರರು.