ಶಾ ತಾಕೀತು
ಬೆಂಗಳೂರು, ಮಾ. ೨೭- ಮುಂದಿನ ವಿಧಾನಸಭಾ ಚುನಾವಣೆಗೆ ಯಾರಿಗೆಲ್ಲ ಟಿಕೆಟ್ ನೀಡಬೇಕು, ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನೆಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಪಕ್ಷದ ಗೆಲುವಿಗೆ ಏನೆಲ್ಲಾ ರಣತಂತ್ರಗಳನ್ನು ಮಾಡಬೇಕೋ ಆ ಕಡೆ ಗಮನ ಹರಿಸಿ ಎಂದು ಬಿಜೆಪಿಯ ವರಿಷ್ಠ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ನಾಯಕರಿಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಚುನಾವಣಾ ಸಿದ್ದತೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿದ್ದವು.
ಸಭೆಯಲ್ಲಿದ್ದ ಕೆಲ ಪ್ರಮುಖ ಮುಖಂಡರುಗಳು ಹಾಲಿ ಶಾಸಕರಲ್ಲಿ ಕೆಲವರಿಗೆ ಟಿಕೆಟ್ ಬೇಡ, ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಪ್ರಸ್ತಾಪಿಸಿದ್ದು, ಆಗ ಅಮಿತ್ ಶಾರವರು ಚುನಾವಣಾ ಟಿಕೆಟ್, ಅಭ್ಯರ್ಥಿಗಳ ಆಯ್ಕೆ ಎಲ್ಲವನ್ನೂ ನಾವು ತೀರ್ಮಾನ ಮಾಡುತ್ತೇವೆ. ನೀವು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ, ಗೆಲುವಿಗೆ ಏನು ಮಾಡಬೇಕೋ ಆ ಕಡೆ ಗಮನ ನೀಡಿ ಎಂದು ಹೇಳಿದರು ಎನ್ನಲಾಗಿದೆ.
ಚುನಾವಣಾ ಟಿಕೆಟ್ ಸಂಬಂಧ ಈಗಾಗಲೇ ವರಿಷ್ಠರಿಗೆ ಸಮೀಕ್ಷಾ ವರದಿಗಳು ಕೈ ಸೇರಿವೆ. ನಿಮ್ಮ ಜತೆಯೂ ಆ ಸಮೀಕ್ಷಾ ವರದಿ ಆಧರಿಸಿ ಒಂದು ಚರ್ಚೆ ಮಾಡುತ್ತೇವೆ. ನಂತರ ಯಾವ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್ ಎಂಬುದನ್ನು ತೀರ್ಮಾನ ಮಾಡುತ್ತೇವೆ. ಹಾಲಿ ಶಾಸಕರಲ್ಲಿ ಯಾರಿಗೆ ಟಿಕೆಟ್ ನೀಡಬೇಕು, ಯಾರಿಗೆ ನೀಡಬಾರದು ಎಂಬ ಬಗ್ಗೆಯೂ ನಾವೇ ತೀರ್ಮಾನ ಮಾಡುತ್ತೇವೆ. ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕು ಎಂದು ಅಮಿತ್ ಶಾ ಕೆಲ ಮುಖಂಡರುಗಳಿಗೆ ಹೇಳಿದರು ಎನ್ನಲಾಗಿದೆ.
ಪಕ್ಷದ ವರಿಷ್ಠ ಮಟ್ಟದಲ್ಲಿ ಸಭೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸುತ್ತೇವೆ. ನಂತರ ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದರು ಎನ್ನಲಾಗಿದೆ.
ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಕೆಲವೆಡೆ ಯಶಸ್ವಿಯಾಗಿಲ್ಲ. ಬೆಂಗಳೂರಿನ ಕೆಲ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಸಿಲ್ಲ. ಇದು ಸರಿಯಲ್ಲ ಎಂದು ಅಮಿತ್ ಶಾ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ.
ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲುವತ್ತ ಗಮನ ನೀಡಿ. ಹಾಗೆಯೇ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು ನೀಡಿ. ಈ ಭಾಗದಲ್ಲಿ ಜನರನ್ನು ಸೆಳೆಯಲು ಹೆಚ್ಚಿನ ಸಭೆ-ಸಮಾವೇಶಗಳನ್ನು ನಡೆಸುವಂತೆ ಅವರು ಸಭೆಯಲ್ಲಿ ಸೂಚನೆ ನೀಡಿದರು ಎಂದು ಹೇಳಲಾಗಿದೆ.
ಈ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ್, ಆರ್. ಅಶೋಕ್, ಬಿ. ಶ್ರೀರಾಮುಲು, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಲಕ್ಷ್ಮಣಸವದಿ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಬಿಜೆಪಿ ಸಹ ಉಸ್ತುವಾರಿ ಬಿ.ಕೆ. ಅರುಣ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಹಲವು ನಾಯಕರುಗಳು ಭಾಗವಹಿಸಿದ್ದರು.