ಟಿಕೆಟ್ ಸಿಗದಿದ್ದರೆ ಭವಾನಿ ಬಂಡಾಯ

ಬೆಂಗಳೂರು,ಮಾ.೩೧:ಹಾಸನ ಕ್ಷೇತ್ರದಿಂದ ತಮ್ಮ ಪತ್ನಿ ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್ ಸಿಗದಿದ್ದರೆ ಅವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಮಾಜಿ ಸಚಿವ ರೇವಣ್ಣ ಮುಂದಾಗಿದ್ದಾರೆ.
ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ. ಹೆಚ್.ಡಿ ರೇವಣ್ಣ ನಡುವೆ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳು ಮೂಡಿವೆ.
ಹಾಸನ ಕ್ಷೇತ್ರದಿಂದ ಮಾಜಿ ಶಾಸಕ ಎಸ್. ಪ್ರಕಾಶ್ ಅವರ ಪುತ್ರ ಎಚ್.ಪಿ ಸ್ವರೂಪ್ ಅವರನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದು, ಭವಾನಿ ರೇವಣ್ಣ ಅವರ ಸ್ಪರ್ಧೆಗೆ ಅವರು ಒಪ್ಪಿಲ್ಲ. ಇದು ರೇವಣ್ಣ ಅವರ ಸಿಟ್ಟಿಗೆ ಕಾರಣವಾಗಿದ್ದು, ಹಾಸನ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಅಲ್ಲಿ ಬಿಜೆಪಿಯ ಪ್ರೀತಂಗೌಡ ಅವರನ್ನು ಸೋಲಿಸಲೇಬೇಕು. ಹಾಗಾಗಿ, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಿದರೆ ಸ್ವತಂತ್ರವಾಗಿ ಕಣಕ್ಕಿಳಿಸುವುದಾಗಿ ರೇವಣ್ಣ, ಕುಮಾರಸ್ವಾಮಿಯವರಿಗೆ ನೇರವಾಗಿಯೇ ಹೇಳಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ಹಾಸನ ಅಭ್ಯರ್ಥಿ ಆಯ್ಕೆ ಜೆಡಿಎಸ್‌ಗೆ ತಲೆನೋವು ತಂದಿದೆ. ನಿನ್ನೆ ಸಹ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಎಂದು ಸ್ಪಷ್ಟಪಡಿಸಿದ್ದರು. ಆದರೆ, ರೇವಣ್ಣ ಮಾತ್ರ ಹಿಡಿದ ಪಟ್ಟು ಬಿಡುತ್ತಿಲ್ಲ ಹಾಗಾಗಿ, ಹಾಸನ ಟಿಕೆಟ್ ಕದನ ಕುತೂಹಲ ಮೂಡಿಸಿದೆ.