ಟಿಕೆಟ್ ವಂಚಿತರ ಪಕ್ಷಾಂತರ ಪರ್ವ

ಬೆಂಗಳೂರು,ಏ.೮:ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದ ಕೆಲ ಆಕಾಂಕ್ಷಿಗಳು ಜೆಡಿಎಸ್ ಹಾಗೂ ಬಿಜೆಪಿಯತ್ತ ಮುಖ ಮಾಡಿರುವಾಗಲೇ ಬಿಜೆಪಿಯಲ್ಲೂ ಟಿಕೆಟ್ ಸಿಗುವ ಅನುಮಾನದಲ್ಲಿರುವ ಕೆಲ ಹಾಲಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರುವ ಸನ್ನಾಹದಲ್ಲಿದ್ದಾರೆ.
ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಇಂದು ಮತ್ತು ನಾಳೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಸಂಸದೀಯ ಸಭೆ ನಡೆಯಲಿದ್ದು, ಟಿಕೆಟ್ ಸಿಗುವ ಅನುಮಾನದಲ್ಲಿರುವ ಕೆಲ ಹಾಲಿ ಶಾಸಕರು ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದು, ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ.
ಗುಜರಾತ್ ಮಾದರಿಯಲ್ಲಿ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ಮುಂದಾದರೆ, ಹಾಲಿ ಶಾಸಕರಲ್ಲಿ ಕನಿಷ್ಠ ೨೦ ಮಂದಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದ್ದು, ಇವರೆಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.
ಕಾಂಗ್ರೆಸ್ ೨ನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಟಿಕೆಟ್ ಸಿಗದ ಆಕಾಂಕ್ಷಿಗಳು ಜೆಡಿಎಸ್ ಹಾಗೂ ಬಿಜೆಪಿ ಸೇರಲು ಮುಂದಾಗಿದ್ದಾರೆ. ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರುವುದು ನಿಶ್ಚಿತ, ಕೆಲ ಕ್ಷೇತ್ರಗಳಲ್ಲಿ ಗೆಲುವಿನ ಅಭ್ಯರ್ಥಿಯ ಕೊರತೆ ಅನುಭವಿಸುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಬಿಜೆಪಿಯ ಬಂಡಾಯದ ಲಾಭ ಪಡೆದು ಇವರುಗಳನ್ನೆಲ್ಲ ಪಕ್ಷ ಸೇರ್ಪಡೆ ಮಾಡಿಕೊಳ್ಳುವ ತವಕದಲ್ಲಿವೆ. ಹಾಗಾಗಿಯೇ, ಜೆಡಿಎಸ್‌ನ ಅಭ್ಯರ್ಥಿಗಳ ೨ನೇ ಪಟ್ಟಿ ಹಾಗೂ ಕಾಂಗ್ರೆಸ್ ಪಕ್ಷ ೩ನೇ ಪಟ್ಟಿ ಬಿಡುಗಡೆಯನ್ನು ತಡ ಮಾಡಿವೆ. ಬಿಜೆಪಿಯ ಪಟ್ಟಿ ಪ್ರಕಟವಾದ ನಂತರ ಅಲ್ಲಿ ಟಿಕೆಟ್ ಸಿಗದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರಿಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಕಾಯ್ದು ನೋಡುವ ತಂತ್ರಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಶರಣಾಗಿವೆ.
ಬಿಜೆಪಿಯಲ್ಲಿ ಬಂಡಾಯ, ಭೀತಿ
ಬಿಜೆಪಿಯಲ್ಲಿ ಪಟ್ಟಿ ಪರಿಷ್ಕರಣೆಗೂ ಮುನ್ನವೇ ಅಭ್ಯರ್ಥಿಗಳ ಆಯ್ಕೆ ತಲೆನೋವು ತಂದಿದೆ. ಕನಿಷ್ಠ ೩೦ ರಿಂದ ೪೦ ಕ್ಷೇತ್ರಗಳಲ್ಲಿ ೪ ರಿಂದ ೫ ಅಭ್ಯರ್ಥಿಗಳು ಪೈಪೋಟಿ ಇರುವುದರಿಂದ ಯಾರನ್ನೇ ಅಭ್ಯರ್ಥಿಯನ್ನಾಗಿಸಿದರೂ ಈ ಕ್ಷೇತ್ರಗಳಲ್ಲೆಲ್ಲ ಬಂಡಾಯದ ಭೀತಿ ಬಿಜೆಪಿ ನಾಯಕರಲ್ಲಿ ಆತಂಕ ತಂದಿದೆ.
ಬಿಜೆಪಿಯ ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲೂ ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದು, ಹಾಲಿ ಶಾಸಕರಿಗೆ ಟಿಕೆಟ್ ನೀಡುವುದೋ, ಹೊಸ ಮುಖಗಳಿಗೆ ಮಣೆ ಹಾಕುವುದೋ ಎಂಬ ಗೊಂದಲದಲ್ಲಿ ಬಿಜೆಪಿ ನಾಯಕರುಗಳಿದ್ದು, ಇಲ್ಲೂ ಸಹ ಬಂಡಾಯ ಸ್ಪರ್ಧೆಯ ಭೀತಿ ಇದೆ. ಹಾಗಾಗಿ, ಬಿಜೆಪಿ ನಾಯಕರು ಬಹಳ ಎಚ್ಚರಿಕೆಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕಸರತ್ತು ನಡೆಸಿದ್ದಾರೆ. ಏನೇ ಆದರೂ ಬಂಡಾಯ ಬಿಜೆಪಿಗೆ ಕಾಡುವುದು ನಿಶ್ಚಿತ.

ಅಭ್ಯರ್ಥಿಗಳ ಆಖೈರು, ಬಿಜೆಪಿ ವರಿಷ್ಠರ ಸಭೆ
ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಇಂದು ಸಂಜೆ ೫ ಗಂಟೆಗೆ ದೆಹಲಿಯಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ಸಭೆ ನಡೆದಿದೆ. ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಶೋಭಾಕರಂದ್ಲಾಜೆ ಮತ್ತಿತರರು ಈ ಸಭೆಯಲ್ಲಿ ಪಾಲ್ಗೊಳ್ಳುವರು. ನಾಳೆ ಸಂಜೆ ಹೊತ್ತಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.
ಇಂದಿನ ಸಭೆಗೂ ಮುನ್ನ ನಿನ್ನೆ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಮ್ಮ ನಿವಾಸದಲ್ಲಿ ರಾಜ್ಯ ನಾಯಕರುಗಳ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದರು.