ಟಿಕೆಟ್ ವಂಚನೆ: ಒಡಿಶಾದಲ್ಲಿ ಹಾಲಶ್ರೀ ಬಂಧನ

ಬೆಂಗಳೂರು,ಸೆ.೧೯-ಬಿಜೆಪಿ ಎಂಎಲ್ ಎ ಟಿಕೆಟ್ ವಂಚನೆ ಗ್ಯಾಂಗ್ ನ ಮೂರನೇ ಆರೋಪಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ. ಸಂಜೆ ವೇಳೆಗೆ ಸ್ವಾಮೀಜಿಯನ್ನು ಬೆಂಗಳೂರಿಗೆ ಕರೆ ತರುವ ನಿರೀಕ್ಷೆಯಿದೆ.
ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ನಡೆಸಿದ ಚೈತ್ರಾ ಕುಂದಾಪುರ ಗ್ಯಾಂಗ್ ಸಿಕ್ಕಿಬಿದ್ದ ಬೆನ್ನಲ್ಲೇ ನಾಪತ್ತೆಯಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಹಾಲಶ್ರೀ ಬಂಧನಕ್ಕೆ ಸಿಸಿಬಿ ಪೊಲೀಸರು ತೀವ್ರ ಶೋಧ ಕೈಗೊಂಡು ಒಡಿಶಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಲಶ್ರೀ ಆಶ್ರಮದಲ್ಲಿರುವ ಕಾರನ್ನು ಖುದ್ದಾಗಿ ತಾವೇ ಚಲಾಯಿಸಿಕೊಂಡು ಪರಾರಿಯಾಗಿರುವ ಮಾಹಿತಿಗಳು ಲಭ್ಯವಾಗಿ ಅದನ್ನು ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಮೂರು ದಿನಗಳ ಹಿಂದೆ, ಸ್ವಾಮೀಜಿಯವರ ಖಾಸಗಿ ಡ್ರೈವರ್ ಲಿಂಗರಾಜುನನ್ನು ಬಂಧಿಸಿ ನಡೆಸಿದ ವಿಚಾರಣೆ ವೇಳೆ ಹಾಲಶ್ರೀ ತಾವೇ ಖುದ್ದಾಗಿ ಕಾರು ಚಲಾಯಿಸಿಕೊಂಡು ಮೈಸೂರಿಗೆ ಹೋಗಿದ್ದಾಗಿಯೂ,ಅಲ್ಲಿ ಕಾರಿನ ನಂಬರ್ ಪ್ಲೇಟ್ ಗಳನ್ನು ಕಳಚಿಟ್ಟು ಅಲ್ಲಿಂದ ಹೈದರಾಬಾದ್‌ಗೆ ತೆರಳಿದ್ದಾಗಿಯೂ ತಿಳಿದುಬಂದಿತ್ತು. ಹಾಗಾಗಿ, ಸಿಸಿಬಿ ಪೊಲೀಸರ ತಂಡವೊಂದು ಹೈದರಾಬಾದ್‌ಗೆ ತೆರಳಿತ್ತು.
ಮೈಸೂರು, ಬೆಂಗಳೂರು, ವಿಜಯನಗರ ಜಿಲ್ಲೆಯ ಹಡಗಲಿ ಸೇರಿದಂತೆ ಎಲ್ಲೆಡೆ ಸ್ವಾಮೀಜಿಗಾಗಿ ಸಿಸಿಬಿ ಪೊಲೀಸರು ಶೋಧನೆ ಮಾಡಿ ಕೊನೆಗೆ ಒಡಿಶಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಶರ್ಟ್ ಧರಿಸಿದ್ದ ಸ್ವಾಮೀಜಿ:
ಮೈಸೂರಿಗೆ ಹೋಗಿದ್ದ ಸ್ವಾಮೀಜಿ ಅಲ್ಲಿಂದ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಅಲ್ಲಿನ ಹೈದರಾಬಾದ್ ವಿಮಾನ ನಿಲ್ದಾಣದಿಂದ ಒಡಿಶಾದ ಕಟಕ್‌ಗೆ ತೆರಳಿದ್ದರು, ಸ್ವಾಮೀಜಿ ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ರೈಲಿನಲ್ಲಿ ಬೇರೊಬ್ಬನ ಜೊತೆಗೆ ಪ್ರಯಾಣ ಮಾಡುತ್ತಿದ್ದರು.
ಒಡಿಶಾದ ಪೊಲೀಸರ ಸಹಾಯದಿಂದ ಕರ್ನಾಟಕದ ಸಿಸಿಬಿ ಪೊಲೀಸರು ಸ್ವಾಮೀಜಿಯನ್ನು ಸಿನಿಮೀಯ ಶೈಲಿಯಲ್ಲಿ ಓಡಿಸಿಕೊಂಡು ಹೋಗಿ ಬಂಧಿಸಿದ್ದಾರೆ. ಇನ್ನು ಒಡಿಶಾದ ಕಟಕ್‌ನಿಂದ ಈಶಾನ್ಯ ರಾಜ್ಯಗಳಿಗೆ ಹೋಗುವ ರೈಲಿನಲ್ಲಿ ಸ್ವಾಮೀಜಿ ಬಂಧನವಾಗಿದ್ದು, ಮಧ್ಯಾಹ್ನ ೧.೩೦ರ ವಿಮಾನದಲ್ಲಿ ಬೆಂಗಳೂರಿಗೆ ಕರೆತಂದು ವಿಚಾರಣೆ ಕೈಗೊಳ್ಳಲಿದ್ದಾರೆ.
ದೂರು ನೀಡಿದ್ದ ಹಾಲಶ್ರೀ :
ಉಡುಪಿಯಲ್ಲಿ ವಂಚನೆಗೊಳಗಾದ ಉದ್ಯಮಿ ಗೋವಿಂದಬಾಬು ಪೂಜಾರಿ ದೂರು ನೀಡುವ ಮೊದಲೇ, ಅಭಿನವ ಹಾಲಶ್ರೀ ಸ್ವಾಮೀಜಿ ನಗರದಲ್ಲಿ ದೂರು ದಾಖಲಿಸಿದ್ದರು.
ರಾಜರಾಜೇಶ್ವರಿ ನಗರ ಸಮೀಪದ ಕೆಂಚೇನಹಳ್ಳಿಯ ಪ್ರೀಮಿಯರ್ ಟೆಂಪಲ್ ಬೆಲ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಹಾಲಶ್ರೀ ನೆಲೆಸಿದ್ದರು. ಜು.೧೧ರಂದು ಆರ್.ಆರ್.ನಗರ ಠಾಣೆಗೆ ತೆರಳಿದ ಸ್ವಾಮೀಜಿ, ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು.
ಈ ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸೀನಪ್ಪ ಶೆಟ್ಟಿ, ಉಡುಪಿಯ ಕಾಂಗ್ರೆಸ್ ಪಕ್ಷದ ಸೇವಾ ದಳ (ಸಾಮಾಜಿಕ ಜಾಲತಾಣ)ದ ಸಂಚಾಲಕ ಹರ್ಷ ಮೆಂಡನ್, ದಿನೇಶ್ ನಾಯ್ಕ್ ಹಳ್ಳಿಹೊಳಿ ಹಾಗೂ ಗೋವಿಂದ ಪೂಜಾರಿ ಅವರ ಹೆಸರು ಉಲ್ಲೇಖಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಾಲಶ್ರೀ ಒತ್ತಾಯಿಸಿದ್ದರು.
೧.೫ ಕೋಟಿ ಪಡೆದಿದ್ದ ಶ್ರೀ:
ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ವಂಚನೆ ಮಾಡಲಾದ ೫ ಕೋಟಿ ರೂ. ಹಣದಲ್ಲಿ ೧.೫ ಕೋಟಿ ರೂಗಳನ್ನು ಅಭಿನವ ಹಾಲಶ್ರೀ ಸ್ವಾಮೀಜಿ ಪಡೆದುಕೊಂಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಗ್ಯಾಂಗ್ ನ ೧೦ ಆರೋಪಿಗಳ ಪೈಕಿ ೭ ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.