ಟಿಕೆಟ್ ನನಗೆ ಖಚಿತ: ಆತಂಕ ಬೇಡ- ಸೊಗಡು

ತುಮಕೂಕು, ಏ. ೧೧- ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ತುಮಕೂರು ನಗರ ಕ್ಷೇತ್ರದಿಂದ ನೂರಕ್ಕೆ ನೂರರಷ್ಟು ಬಿಜೆಪಿ ಟಿಕೆಟ್ ನನಗೆ ಸಿಗಲಿದೆ. ಈ ಬಗ್ಗೆ ನಗರದ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಇಂದಿಲ್ಲಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಜನತೆ ಟಿಕೆಟ್ ವಿಚಾರದಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಪಕ್ಷದಿಂದ ಈ ಬಾರಿ ನೂರಕ್ಕೆ ನೂರರಷ್ಟು ನನಗೆ ಟಿಕೆಟ್ ಸಿಗಲಿದೆ. ಹಾಗಾಗಿ ಚುನಾವಣೆಗೆ ನನ್ನ ಸ್ಪರ್ಧೆ ಖಚಿತ ಎಂದರು.
ನಗರದ ಮತದಾರರು ನನ್ನನ್ನು ೪ ಬಾರಿ ಶಾಸಕನಾಗಿ ಆಯ್ಕೆ ಮಾಡಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತ ನಗರಕ್ಕೆ ಮೂಲಭೂತ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.
ಪ್ರಸ್ತುತ ಚುನಾವಣಾ ಸಂದರ್ಭ ಬಂದಾಗಲೆಲ್ಲಾ ಕೆಲವರು ಮತದಾರರಿಗೆ ಕೊಡುಗೆಳ ಆಮಿಷ, ಆಣೆ, ಪ್ರಮಾಣ ಮಾಡಿಸುವುದು ಮಹಾ ಅಪರಾಧ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಿದೆ. ಈ ಬಗ್ಗೆ ವಿದ್ಯಾವಂತರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ನಗರದಲ್ಲಿ ೧೦ ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ನಗರದ ಜನರ ಸೇವೆ ಮಾಡಿದ್ದೇನೆ. ಇಪ್ಪತ್ತು ವರ್ಷಗಳ ಕಾಲ ವಿರೋಧ ಪಕ್ಷದ ಶಾಸಕನಾಗಿ, ಬಿಜೆಪಿ ಸರ್ಕಾರ ಬಂದ ಕಡಿಮೆ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ೨೦೧೩ರಲ್ಲಿ ಸೋತ ನಂತರ ಅನೇಕ ಆಮಿಷಗಳು ಬಂದಿದ್ದವು, ಆದರೆ ಪಕ್ಷಕ್ಕೆ ದ್ರೋಹ ಬಗೆಯುವುದಾಗಲೀ, ಪಕ್ಷಾಂತರವಾಗಲಿ ಮಾಡಿಲ್ಲ ಎಂದರು.
೨೦೧೩ ರಿಂದ ೨೦೨೩ ರವರೆಗೆ ಬಂದ ಸರ್ಕಾರಗಳು ನಗರದಲ್ಲಿ ಏನೇ ಅಭಿವೃದ್ಧಿ ಮಾಡಿದ್ದರೂ ಅದು ನಾನು ತಂದ ಯೋಜನೆಗಳು ಮತ್ತು ಅಭಿವೃದ್ಧಿ ಮೇಲೆಯೇ ಆಗಿವೆ. ಸ್ಮಾರ್ಟ್ ಸಿಟಿ ಮಂಜೂರಾತಿಗೆ ಇದೇ ಕಾರಣ. ಎಲ್ಲರನ್ನು ನನ್ನಂತೆ ಕಾಣುವ ಗುಣದಿಂದ ನಗರದಲ್ಲಿ ಎಲ್ಲ ಸಮುದಾಯಗಳು ನನಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದರು.
ದೆಹಲಿ, ಬೆಂಗಳೂರಿನಲ್ಲಿರುವ ಪಕ್ಷದ ವರಿಷ್ಠರು ನನ್ನ ಪರವಾಗಿದ್ದಾರೆ. ನಾಳೆಯಿಂದ ಚುನಾವಣಾ ಪ್ರಚಾರ ಪ್ರಾರಂಭಿಸುತ್ತಿದ್ದು, ಸದ್ಯದಲ್ಲಿಯೇ ನಾಮಪತ್ರ ಸಲ್ಲಿಸುತ್ತೇನೆ. ಪಕ್ಷ ನಡೆಸಿದ ಆಂತರಿಕ ಸರ್ವೆಯಲ್ಲಿ ನನ್ನ ಪರವಾದ ವರದಿ ಇದೆ ಎನ್ನುವ ಮಾಹಿತಿ ಇದೆ. ೨೦ ವರ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವುದು, ಸಾರ್ವಜನಿಕರ ಬೆಂಬಲಕ್ಕೆ ಕಾರಣವಾಗಿದೆ ಎಂದರು.
ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ. ನನ್ನೊಂದಿಗೆ ಎಲ್ಲ ಸಮುದಾಯಗಳ ಮಿತ್ರರು ಇದ್ದಾರೆ. ಯಾವ ಭಯವೂ ಇಲ್ಲ, ಕೊರತೆಯೂ ಇಲ್ಲ. ಮೂಗ್ಬಟ್ಟು, ಸೀರೆ, ಆಣೆ ಪ್ರಮಾಣ ಮಾಡುವ ಮೂಲಕ ಪ್ರಜಾಪ್ರಭುತ್ವ ಆಶಯಗಳನ್ನು ನಾಶಪಡಿಸಲಾಗುತ್ತಿದೆ. ನಗರದಲ್ಲಿರುವ ವಿದ್ಯಾವಂತರು ಇಂತಹ ವಿಚಾರಗಳಿಗೆ ಮಣೆ ಹಾಕಬಾರದು ಎಂದರು.
ಚುನಾವಣಾ ಸಂದರ್ಭದಲ್ಲಿ ಎಣ್ಣೆ, ಹೆಂಡ, ಗಾಂಜಾ, ಅಫೀಮು ಹಂಚಲಾಗುತ್ತಿದೆ, ಯುವಕರನ್ನು ಕೇಂದ್ರೀಕರಿಸಿ ಪಾರ್ಟಿ ಮಾಡಲಾಗುತ್ತಿದೆ. ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ಎನ್ನುವಂತಹ ಸ್ಥಿತಿ ನಗರದಲ್ಲಿ ಇದೆ. ಈ ಬಗ್ಗೆ ಕುಟುಂಬಸ್ಥರು ಮತ್ತು ಪೋಷಕರು ಎಚ್ಚರಿಕೆ ವಹಿಸಬೇಕಿದೆ. ಹಾಗೆಯೇ ಮಾಧ್ಯಮಗಳು ಸಹ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಂಗನಾಯ್ಕ್, ನರಸಿಂಹಯ್ಯ, ಧನಿಯಾಕುಮಾರ್, ಶಾಂತರಾಜು, ಜಯಸಿಂಹ, ಚೌಡಪ್ಪ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ಬಿಎಸ್‌ವೈ ನಮ್ಮ ನಾಯಕರು
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ನಾಯಕರು. ಅವರನ್ನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ. ಬಿ.ಎಸ್.ವೈ ಅವರನ್ನು ಹೊರಗೆ ಇಟ್ಟರೆ ಪಕ್ಷಕ್ಕೆ ಕಷ್ಟವಾಗಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಯಡಿಯೂರಪ್ಪನವರು ಶಿಕಾರಿಪುರದಿಂದ ಪಕ್ಷವನ್ನು ಕಟ್ಟಿ ರಾಜ್ಯಕ್ಕೆ ಹರಡಿದವರು. ಅವರನ್ನು ಪಕ್ಷದಲ್ಲಿ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.