ಟಿಕೆಟ್ ತಪ್ಪಲು ಸಿಎಂ ಕಾರಣ

ಬೆಂಗಳೂರು,ಏ.೧೩:ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ತಮಗೆ ಕೈತಪ್ಪಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರೇ ಕಾರಣ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ದೇಶ ಪೂರಕವಾಗಿ ಟಿಕೆಟ್ ಕೈತಪ್ಪಿಸಿದ್ದಾರೆ ಎಂದು ಹರಿಹಾಯ್ದರು.ಟಿಕೆಟ್ ಕೈ ತಪ್ಪಿರುವುದಕ್ಕೆ ಬೊಮ್ಮಾಯಿರವರೇ ಹೊಣೆಗಾರರು, ನಾನು ರಾಜಕಾರಣದಲ್ಲಿರುವುದು ಅವರಿಗೆ ಸರಿ ಹೋಗುತ್ತಿಲ್ಲ.. ಉದ್ದೇಶಪೂರಕವಾಗಿಯೇ ನನ್ನನ್ನು ರಾಜಕಾರಣದಿಂದ ಸರಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಜಿಲ್ಲೆಯ ರಾಜಕೀಯ ಜವಾಬ್ದಾರಿ ನನ್ನ ಕೈಗೆ ಬರುತ್ತದೆ ಎಂಬುದು ಬೊಮ್ಮಾಯಿ ಲೆಕ್ಕಾಚಾರ ಎಂದು ಆರೋಪಿಸಿದರು.
ಇದನ್ನು ನಾನು ಇಷ್ಟಕ್ಕ ಕೈ ಬಿಡುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅನೇಕ ಹಗರಣ ಮಾಡಿದ್ದಾರೆ. ಅವರ ಅಧಿಕಾರಾವಧೀಯಲ್ಲಿ ೧,೫೦೦ ಕೋಟಿ ಗೂ ಹೆಚ್ಚು ಮೊತ್ತದ ಹಗರಣಗಳಾಗಿವೆ. ಈ ಘನಕಾರ್ಯವನ್ನು ಬೆಳಕಿಗೆ ತರುವ ಕೆಲಸ ಮಾಡುವುದಾಗಿ ಹೇಳುವ ಮೂಲಕ ಹಗರಣ ಬಯಲು ಮಾಡುವ ಸುಳಿವು ನೀಡಿದರು.
ಕಳೆದ ಬಾರಿ ಸಹ ಬೊಮ್ಮಾಯಿರವರು ಟಿಕೆಟ್ ತಪ್ಪಿಸುವ ಕೆಲಸ ಮಾಡಿದ್ದರು. ಅದು ಸಾಧ್ಯವಾಗಲಿಲ್ಲ. ಮೊದಲಿನಿಂದಲೂ ನನ್ನ ಜತೆ ಹಗೆತನ ಮಾಡುತ್ತ ಬಂದಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ನನ್ನ ಮುಂದಿನ ನಡೆ ಬಗ್ಗೆ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದರು.

ಶಾಸಕ ನೆಹರು ಓಲೇಕಾರ್ ತಮ್ಮ ವಿರುದ್ಧ ಮಾಡಿರುವ ೧,೫೦೦ ಕೋಟಿ ರೂ. ಹಗರಣದ ಬಗ್ಗೆ ದಾಖಲೆ ಒದದಗಿಸಲಿ, ತನಿಖೆ ಮಾಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳೂರಿನಲ್ಲಿಂದು ನೆಹರು ಓಲೇಕಾರ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಬರಿ ಹೇಳಿಕೆ ನೀಡಿದ ತಕ್ಷಣ ಹಗರಣ ನಡೆದಿರುವುದು ಸಾಬೀತಾಗಲ್ಲ, ಅವರು ಈ ಕುರಿತು ದಾಖಲೆ ಒದಗಿಸಲಿ. ಅದರ ಸತ್ಯಾಸತ್ಯತೆಯ ತನಿಖೆ ಮಾಡಿಸುತ್ತೇನೆ ಎಂದು ಹೇಳಿದರು.