
ಶೆಟ್ಟರ್ ಗಂಭೀರ ಆರೋಪ
ಹುಬ್ಬಳ್ಳಿ,ಏ.೧೮: ಚುನಾವಣೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಲು ಬಿ.ಎಲ್. ಸಂತೋಷ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.ನಗರದಲ್ಲಿಂದು ಮಾಧ್ಯಮಗಳೆದುರು ತಾವು ಇಷ್ಟುದಿನ ಆಂತರ್ಯದಲ್ಲಿ ಅದುಮಿರಿಸಿಕೊಂಡಿದ್ದ ವೇದನೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಬಿಜೆಪಿಯಲ್ಲಿ ಪಕ್ಷನಿಷ್ಠೆಗಿಂತ ವ್ಯಕ್ತಿನಿಷ್ಠೆ ಶುರುವಾಗಿದೆ.ನನಗೆ ಟಿಕೆಟ್ ಕೈ ತಪ್ಪಲು ಮೂಲ ಕಾರಣ ಬಿ.ಎಲ್. ಸಂತೋಷ್, ತಮ್ಮ ಮಾನಸಪುತ್ರ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ದೊರಕಿಸಲು ನನ್ನನ್ನು ವ್ಯವಸ್ಥಿತವಾಗಿ ಹೊರಗೆ ಕಳುಹಿಸುವ ಸಂಚು ಮಾಡಿದರು ಎಂದು ಆರೋಪಿಸಿದರು.
ಕೆಲವೇ ಕೆಲ ವ್ಯಕ್ತಿಗಳು ಬಿಜೆಪಿಯನ್ನು ತಮ್ಮ ಕಪಿಮುಷ್ಠಿಯಲ್ಲಿರಿಸಿಕೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತದೆ. ಒಳಸುಳಿಯ ಬೆಂಕಿ ಬರೀ ಹುಬ್ಬಳ್ಳಿಯಲ್ಲಷ್ಟೇ ಅಲ್ಲ ಪಕ್ಕದ ಬೆಳಗಾವಿ, ಹಾವೇರಿ, ಅಲ್ಲದೇ ಇಡೀ ರಾಜ್ಯಕ್ಕೇ ಹಬ್ಬಲಿದೆ. ಇದನ್ನು ಹಾಗೇ ಬಿಟ್ಟರೆ ಬಿಜೆಪಿ ಇನ್ನೂ ಹೆಚ್ಚಿನ ಹಾನಿ ಅನುಭವಿಸಲಿದೆ ಎಂದರು.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಗಮನಕ್ಕೆ ಎಲ್ಲವನ್ನೂ ತಂದಿದ್ದೆ.ಆದರೆ, ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದಷ್ಟು ಸಂತೋಷ್ ಪ್ರಭಾವ ಬೀರಿದ್ದಾರೆ ಎಂದು ದೂರಿದರು.ಬಿಜೆಪಿ-ಜನಸಂಘದ ಸಂಬಂಧ ನಮ್ಮ ಕುಟುಂಬಕ್ಕೆ ಹೇಗಿತ್ತು ಎಂಬುದನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ, ಒಂದು ಕಪ್ಪು ಚಿಕ್ಕೆಯೂ ಇರದ, ಯಾವುದೇ ಆರೋಪಗಳಿರದ, ರೈತರ ಸಾಲ ಮನ್ನಾ, ದಿನಗೂಲಿ ನೌಕರರ ಖಾಯಮಾತಿ ಇತ್ಯಾದಿ ಉತ್ತಮ ಕಾರ್ಯಗೈದ ತಮ್ಮನ್ನು ‘ಅವಕಾಶವಾದಿ’, ‘ಅಧಿಕಾರ ಲಾಲಸೆಗೆ ಪಕ್ಷ ಬಿಟ್ಟರು’ ಎಂದು ಟೀಕಿಸುವುದು ಸರಿಯೇ? ಎಂದು ಪ್ರಶ್ನಿಸಿದರು.ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ ಎರಡು ವರ್ಷಗಳ ಕಾಲ ಯಾವುದೇ ಅಧಿಕಾರವಿಲ್ಲದೇ ಶಾಸಕನಾಗಿ ಕೆಲಸ ಮಾಡಿದೆ, ಹಿಂದೆ ನಾಲ್ಕೈದು ಜನ ಕಾರ್ಯಕರ್ತರಿರದಿದ್ದರೂ ಹಳ್ಳಿ ಹಳ್ಳಿಗೆ ತಿರುಗಿ ಗ್ರಾಮಮಟ್ಟದಲ್ಲಿ ಪಕ್ಷ ಸಂಘಟಿಸಿದೆ. ಈ ಎಲ್ಲ ಸೇವೆಯನ್ನು ನಿರ್ಲಕ್ಷಿಸಿದ್ದು ಯಾವ ನ್ಯಾಯ? ಎಂದವರು ಪ್ರಶ್ನಿಸಿದರು.ಕ್ಷೇತ್ರದ ಟಿಕೆಟ್ ಪಡೆಯುವುದು ಮಾತ್ರ ಒಂದು ವಿಷಯವಲ್ಲ, ಆದರೆ ಅದು ಮರ್ಯಾದೆಯ ಪ್ರಶ್ನೆ ಎಂದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದಾಗಲೂ ಕೇಳಿದ್ದು ತಮ್ಮನ್ನು ಗೌರವಯುತವಾಗಿ ಹೊರಗೆ ಕಳಿಸಿ ಎಂದು, ನಾಲ್ಕೈದು ದಿನ ಮೊದಲು ವಸ್ತುಸ್ಥಿತಿ ಹೇಳಿದ್ದರೆ ಹೃದಯಪೂರ್ವಕವಾಗಿ ಅವರು ಹೇಳಿದಂತೆ ಒಪ್ಪಿಕೊಳ್ಳುತ್ತಿದ್ದೆ ಇಷ್ಟೊಂದು ತಂತ್ರಗಳನ್ನು ಮಾಡಬೇಕಿರಲಿಲ್ಲ ಎಂದು ಶೆಟ್ಟರ್ ಗುಡುಗಿದರು.ತಮಗೆ ಬೇಕಾಗ ಒಬ್ಬ ವ್ಯಕ್ತಿಗೆ ಟಿಕೆಟ್ ಕೊಡಿಸುವ ಸಲುವಾಗಿ ಈ ರೀತಿ ಅವಮಾನ ಮಾಡಬೇಕಿತ್ತೇ? ಬಿಜೆಪಿಯನ್ನು ಕಪಿಮುಷ್ಠಿಯಲ್ಲಿರಿಸಿಕೊಂಡಿರುವ ಬಿ.ಎಲ್. ಸಂತೋಷ ಈ ಎಲ್ಲ ವಿದ್ಯಮಾನಗಳ ಹಿಂದಿನ ಸೂತ್ರಧಾರ ಎಂದು ಅವರು ಹೇಳಿದರು.ಮೈಸೂರಿನ ರಾಮ್‌ದಾಸ್‌ರವರಿಗೂ ಟಿಕೆಟ್ ಕೈ ತಪ್ಪಲು ಸಂತೋಷ್ ಕಾರಣ. ಸಂತೋಷ್‌ಗೆ ಆಪ್ತರಾಗಿರುವ ಶ್ರೀವತ್ಸಾ ಅವರಿಗೆ ಟಿಕೆಟ್ ಕೊಡಿಸಲು ಸಂತೋಷ್ ರಾಮ್‌ದಾಸ್‌ರವರಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.ಇದೇ ಸಂತೋಷ್ ಕೇರಳದಲ್ಲಿ ಉಸ್ತುವಾರಿಯಾಗಿದ್ದಾಗ ಒಂದೂ ಸ್ಥಾನವೂ ಬರಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಗೆ ಎರಡೋ ಮೂರೋ ಸೀಟ್ ಬಂತು ಅಷ್ಟೆ. ಇವತ್ತು ಕರ್ನಾಟಕದಲ್ಲಿ ಬಿ.ಎಲ್. ಸಂತೋಷ್ ಕಾರುಬಾರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಉಸ್ತುವಾರಿ ಧಮೇಂದ್ರ ಪ್ರಧಾನ್ ನನ್ನನ್ನು ಕರೆದು ಮಾತನಾಡಿಲ್ಲ. ಸಹ ಉಸ್ತುವಾರಿ ಕೆ. ಅಣ್ಣಾಮಲೈ ಅವರಿಗೆ ರಾಜ್ಯದ ಕ್ಷೇತ್ರಗಳ ಬಗ್ಗೆ ಮಾಹಿತಿಯೇ ಇಲ್ಲ. ಒಂದು ಚುನಾವಣೆ ಗೆಲ್ಲದಿರುವವರು ಚುನಾವಣಾ ಸಹ ಉಸ್ತುವಾರಿ ಎಂದು ವ್ಯಂಗ್ಯವಾಡಿದರು.
ಕೆಲ ದಿನಗಳ ಹಿಂದೆ ನಳೀನ್‌ಕುಮಾರ್ ಕಟೀಲು ಅವರು ನಾನು ಸಂತೋಷ್ ಹೇಳಿದಂತೆ ಕೇಳುತ್ತೇನೆ ಎಂದು ಮಾತನಾಡಿದ್ದು ವೈರಲ್ ಆಗಿತ್ತು. ಯಡಿಯೂರಪ್ಪ ಅವರ ಕಾಲ ಮುಗಿಯಿತು. ಕೆ.ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಕಾಲ ಮುಗಿಸುತ್ತೇವೆ ಎಂದು ಹೇಳಿರುವುದು ಈ ಆಡಿಯೋದಲ್ಲಿ ಇತ್ತು ಎಂದರು.