ಟಿಕೆಟ್ ಕೊಡುವಂತೆ ಯಾರನ್ನೂ ಕೇಳಿಲ್ಲ: ಶ್ರೀನಿವಾಸ್

ತುಮಕೂರು, ಏ. ೧- ನಾನು ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿ ಎಂದು ಇದುವರೆವಿಗೂ ಯಾವ ಕಾಂಗ್ರೆಸ್ ಮುಖಂಡರನ್ನು ಕೇಳಿಲ್ಲ, ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಕೊಡುತ್ತೇನೆ ಎಂದು ಯಾವ ನಾಯಕರು ಹೇಳಿಲ್ಲ, ಯಾವುದೇ ಬೇಡಿಕೆಯನ್ನು ಪಕ್ಷದ ಹಿರಿಯ ನಾಯಕರಲ್ಲಿ ನಾನು ಇಟ್ಟಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಳಿಯೂ ಟಿಕೆಟ್ ಕೇಳಿಲ್ಲ, ಯಾರಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.
ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ ಜಿ.ಎಸ್.ಪ್ರಸನ್ನಕುಮಾರ್ ಮತ್ತು ಹೊನ್ನಗಿರಿಗೌಡ ಅವರನ್ನು ಹಿರಿಯರ ಸಮ್ಮುಖದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ನ್ನು ಕ್ಷೇತ್ರದಲ್ಲಿ ಗೆಲ್ಲಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಕುಕ್ಕರ್ ಹಂಚುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಉತ್ತರಿಸಿದ ಅವರು, ಹೊಸ ವರ್ಷಕ್ಕೆ ಹಂಚಿರುವುದು ನಿಜ ಎಂದರು.
ಕಾಂಗ್ರೆಸ್‌ನವರೇ ನಿಮ್ಮನ್ನು ಸೋಲಿಸಲು ಹೊರಟಿದ್ದಾರೆ ಎಂಬ ಪತ್ರಕರ್ತರ ಮಾತಿಗೆ ಗರಂ ಆದ ಎಸ್.ಆರ್. ಶ್ರೀನಿವಾಸ್ ಅವರು, ನಾನು ೪ ಚುನಾವಣೆಗಳನ್ನು ಎದುರಿಸಿದ್ದೇನೆ. ಯಾರೋ ಒಂದಿಬ್ಬರು ಸೋಲು-ಗೆಲುವು ನಿರ್ಧಾರ ಮಾಡುವುದಾಗಿದ್ದರೆ ಮತದಾರರು ಏಕೆ ಇರಬೇಕು. ನಮ್ಮ ಭವಿಷ್ಯ ಮತದಾರರರ ಮೇಲೆ ನಿಂತಿದೆ, ಯಾವ ವ್ಯಕ್ತಿಗಳಿಂದಲ್ಲ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ಪತ್ರ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ ಅವರು ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ರಣ ಕಲಿಗಳು ಬೇಕಿತ್ತು. ಅಂತಹ ರಣಕಲಿ ವಾಸಣ್ಣ ಇಂದು ಎಲ್ಲಾ ಅಸ್ತ್ರಗಳೊಂದಿಗೆ ಯುದ್ಧಕ್ಕೆ ನಿಲ್ಲಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಗುಬ್ಬಿ ತಾಲ್ಲೂಕಿನ ಕಾಂಗ್ರೆಸ್ ಅಧ್ಯಕ್ಷ ಚಿಕ್ಕರಂಗಪ್ಪ, ಪಾವಗಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.