ಟಿಕೆಟ್ ಕೈತಪ್ಪಿದ್ದಕ್ಕೆ ಯಡಿಯೂರಪ್ಪ ವಿರುದ್ಧ ಟೀಕೆ ಸಲ್ಲದು: ಶಂಕರಗೌಡ ಪಾಟೀಲ

ವಿಜಯಪುರ, ಮಾ.17:ಇಡೀ ರಾಜ್ಯದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಇದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಕಾರ್ಯದರ್ಶಿ, ದೆಹಲಿ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಅವರನ್ನು ಟೀಕಿಸುವುದು ಯಾರಿಗೂ ಶೋಭೆ ತರುವುದಿಲ್ಲ ಎಂದರು.
ನಢನು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಟಿಕೆಟ್ ಕೇಳಿದ್ದೆ. ಪಕ್ಷದ ವರಿಷ್ಠರು ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿಯಿಂದ ಕಣಕ್ಕಿಳಿಯಲು ಸೂಚಿಸಿದ್ದಾರೆ. ನಾನು ವರಿಷ್ಠರ ನಿರ್ಧಾರಕ್ಕೆ ಬದ್ಧ. ಹಾಗಾಗಿ ನಾನು ವಿರೋಧ ಮಾಡುವುದಿಲ್ಲ ಎಂದು ನುಡಿದರು.
ನಾನು ಹಲವಾರು ಬಾರಿ ಶಾಸಕ ಸ್ಥಾನಕ್ಕೆ ಟಿಕೆಟ್ ಪಡೆದು ಸ್ಪರ್ಧಿಸಿದ್ದೆನು. ಆದರೆ ನನಗೆ ಅದೃಷ್ಟ ಕೈಕೊಟ್ಟಿದೆ. ಇದಕ್ಕೆ ಯಡಿಯೂರಪ್ಪ ಅವರನ್ನು ಟೀಕಿಸುವುದು, ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದರು. ಆದ್ದರಿಂದ ಅಸಮಾಧಾನಗೊಂಡು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮಾಡುವುದು ಬೇಡ ಎಂದರು.
ಇಡೀ ರಾಜ್ಯದಲ್ಲಿ ಬಿಜೆಪಿ ನಂಬರ್ 1 ಸ್ಥಾನದಲ್ಲಿದೆ. ಬಿಜೆಪಿ ಪಕ್ಷಕ್ಕೆ ಬರುವ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದರು.
ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಆಗ ನಮಗೆ ಬೆಲೆ ಬಂದಿದೆ. ಪಕ್ಷ ಅಧಿಕಾರಕ್ಕೆ ಬಂದಾಗ್ಗೆ ಎಲ್ಲವನ್ನೂ ಎಲ್ಲರೂ ಅನುಭವಿಸಿದ್ದಾರೆ. ಟಿಕೆಟ್ ಸಿಗದ ವೇಳೆ ಯಡಿಯೂರಪ್ಪ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೇರೆಯವರು ವಿರೋಧಿಸಿದರೂ ಯಡಿಯೂರಪ್ಪ ಅವರು ಸ್ವತಃ ಯತ್ನಾಳ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹಾಗಾಗಿ ಯತ್ನಾಳ ಅವರು ಯಡಿಯೂರಪ್ಪನವರನ್ನು ಟೀಕೆ ಮಾಡುವುದು ಸಲ್ಲದು ಎಂದರು.
ವಿಜುಗೌಡ ಪಾಟೀಲ, ಗುರುಶಾಂತ ನಿಡೋಣಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.