ಟಿಕಾಯತ್ ವಿರುದ್ಧ ಪ್ರಕರಣ ವಾಪಸ್‌ಗೆ ಆಗ್ರಹ

ಕೋಲಾರ,ಮಾ.೨೬: ರೈತ ಮಹಾ ಪಂಚಾಯತ್‌ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯಿತ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ರೈತಸಂಘದ
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದ್ದಾರೆ. ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಈಗಾಗಲೇ ೩-೪ ತಿಂಗಳುಗಳಿಂದಲೂ ರೈತರು ಐತಿಹಾಸಿಕ ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರವು ಈವರೆಗೂ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ರಾಜ್ಯದಲ್ಲಿ ಇತ್ತೀಚೆಗೆ ನಡೆದಿದ್ದ ರೈತ ಮಹಾ ಪಂಚಾಯತ್‌ಗೆ ಆಗಮಿಸಿದ್ದ ಟಿಕಾಯಿತ್ ಅವರು, ರೈತರ ಹಿತದೃಷ್ಠಿಯಿಂದಾಗಿ ಕಾಯಿದೆಗಳನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಲು ಬೆಂಗಳೂರಿಗೆ ರೈತರು ಮುತ್ತಿಗೆ ಹಾಕಬೇಕು ಎಂದು ಕರೆ ನೀಡಿರುವುದರಲ್ಲಿ ತಪ್ಪಿಲ್ಲ ಎಂದರು. ಆದರೂ ಶಿವಮೊಗ್ಗ ಮತ್ತು ಹಾವೇರಿಯಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ರಾಕೇಶ್ ಟಿಕಾಯಿತ್ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದು ಖಂಡನೀಯವಾಗಿದ್ದು, ಇದು ಸರ್ಕಾರ ಮಾಡಿರುವ ತಂತ್ರವಾಗಿದೆ. ಇಂತಹ ಎಷ್ಟು ತಂತ್ರಗಳನ್ನು ಮಾಡಿದರೂ ಸರ್ಕಾರದಿಂದ ರೈತರ ಹೋರಾಟವನ್ನು ಮಣಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಈ ಕೂಡಲೇ ಪ್ರಕರಣಗಳನ್ನುವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಉಗ್ರ
ಹೋರಾಟಗಳಿಗೆಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.