ಟಿಕಾಯತ್ ವಿರುದ್ಧ ಎಫ್‌ಐಆರ್ ರದ್ಧತಿಗೆ ಹೆಚ್‌ಡಿಕೆ ಆಗ್ರಹ


ಬೆಂಗಳೂರು, ಮಾ. ೨೫- ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೂಡಲೇ ಎಫ್‌ಐಆರ್ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.
ಟಿಕಾಯತ್ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿರುವುದು ರೈತರ ದ್ವನಿ ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಹರಿಹಾಯ್ದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ, ಹಾವೇರಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಅವರ ಮೇಲಿದೆ.
ರೈತರ ದ್ದನಿ ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳು ಇವು ಎಂದು ಟ್ವೀಟರ್‌ನಲ್ಲಿ ದೂರಿದ್ದಾರೆ.
ಪ್ರಚೋದನಾಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟುಪ್ರಕರಣ ದಾಖಲಿಸಬೇಕಿತ್ತೋ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಹೋರಾಟ ಮಾಡಲು ರೈತರು ದೆಹಲಿಗೆ ಬರಬೇಕಿಲ್ಲ. ದೆಹಲಿಯಂತೆ ಇಲ್ಲೆ ಹೋರಾಟ ಮಾಡಿ ಎಂಬ ಟಿಕಾಯತ್ ಹೇಳಿಕೆಯಲ್ಲಿ ಯಾವುದೇ ಪ್ರಚೋದನೆ ಇಲ್ಲ. ಇದರಲ್ಲಿ ತಪ್ಪು ಕಂಡವರದ್ದು ಗ್ರಹಿಕೆ ದೋಷವಷ್ಟೇ ಎಂದು ಅವರು ಟೀಕಿಸಿದ್ದಾರೆ.
ಹೋರಾಟ, ಹೋರಾಟಕ್ಕೆ ಕರೆ ನೀಡುವುದು ಸಂವಿಧಾನಬದ್ಧ. ಟಿಕಾಯತ್ ಅವರು ಕೊಚ್ಚಿ ಎನ್ನಲಿಲ್ಲ, ಕೊಲ್ಲಿರಿ ಎನ್ನಲಿಲ್ಲ. ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.