ಟಿಕಾಯತ್ `ಮೊಕದ್ದಮೆ’ ವಾಪಾಸು ಪಡೆಯಲು ಹಕ್ಕೊತ್ತಾಯ

ಪುತ್ತೂರು, ಮಾ.೨೮- ಕಳೆದ ಮಾ.೨೦ರಂದು ಶಿವಮೊಗ್ಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಆಶ್ರಯದಲ್ಲಿ ನಡೆದ ಮಹಾಪಂಚಾಯತ್ ಸಭೆಗೆ ಆಗಮಿಸಿದ ರೈತನಾಯಕ ರಾಕೇಶ್ ಸಿಂಗ್ ಟಿಕಾಯತ್ ಅವರ ಮೇಲೆ ರಾಜ್ಯ ಸರ್ಕಾರ ಸುಳ್ಳು ಮೊಕದ್ದಮೆ (ಐಪಿಸಿ ೧೫೩) ಯನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ ಪುತ್ತೂರು ಉಪವಿಭಾಗಾಧಿಕಾರಿ ಮೂಲಕ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಅವರ ನೇತೃತ್ವದಲ್ಲಿ ರಾಜ್ಯದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹಕ್ಕೊತ್ತಾಯ ಸಲ್ಲಿಸಲಾಯಿತು.

ಬೆಂಗಳೂರು ನಗರಕ್ಕೆ ಆಗಮಿಸದಂತೆ ಮಾಡುವ ಹಾಗೂ ಕೃಷಿ ಮಸೂದೆಯನ್ನು ಹಿಂಪಡೆಯಲು ಹೋರಾಟ ನಡೆಸುತ್ತಿರುವ ರೈತ ನಾಯಕ ಟಿಕಾಯತ್ ಮೇಲೆ ಸುಳ್ಳು ಮೊಕದ್ದಮೆ ಹಾಕಿರುವುದನ್ನು ರೈತಸಂಘ ಖಂಡಿಸಿದೆ. ಈ ಸಂದರ್ಭದಲ್ಲಿ ರೈತ  ಸಂಘ ಹಸಿರುಸೇನೆಯ ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ಜಿಲ್ಲಾ ರೈತ ಮುಖಂಡ ಹರ್ಷ ಕುಮಾರ್ ಹೆಗ್ಡೆ, ಸವಣೂರು ವಲಯಾಧ್ಯಕ್ಷ ಯತೀಂದ್ರ ಶೆಟ್ಟಿ ಮಠ, ಪುಣಚ ವಲಯಾಧ್ಯಕ್ಷ ಇಸುಬು, ಈಶ್ವರಮಂಗಲ ವಲಯಾಧ್ಯಕ್ಷ ಶಿವಚಂದ್ರ, ರಾಜೇಂದ್ರ ಪ್ರಸಾದ್ ಇಡ್ಯಾಡಿ, ಸವಣೂರು ವೆಂಕಪ್ಪ ಗೌಡ, ಯತೀಶ್ ಗೌಡ ಇಡ್ಯಾಡಿ ಇದ್ದರು.