ಟಿಎಲ್‌ಬಿಸಿ : ಏ.೧೦ ರವರೆಗೆ ನೀರು – ಸಿಎಂ ಭರವಸೆ

 • ವಿಜಯೇಂದ್ರ ಮೈಸೂರಿನ ವರುಣಾದಿಂದ ಸ್ಪರ್ಧೆ ಸುಳಿವು
  ಸಿಂಧನೂರು.ಮಾ.೨೧- ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರೀಲ್ ೧೦ ರವರೆಗೆ ನೀರು ಹರಿಸುವ ಮೂಲಕ ರೈತರ ಬೆಳೆ ರಕ್ಷಿಸಲಾಗುತ್ತದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
  ಅವರಿಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತುಂಗಭದ್ರಾ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ರಕ್ಷಣೆಗೆ ರೈತರ ಬೇಡಿಕೆಗೆ ಸ್ಪಂದಿಸುವುದಾಗಿ ಹೇಳಿದ ಅವರು, ಏಪ್ರೀಲ್ ೧೦ ರವರೆಗೆ ನೀರು ಬಿಡುವ ಮೂಲಕ ರೈತರ ಬೆಳೆ ರಕ್ಷಿಸಲಾಗುತ್ತದೆ. ಈ ಬಗ್ಗೆ ರೈತರಿಗೆ ಯಾವುದೇ ಆತಂಕಬೇಡ. ಈ ಭಾಗದ ೫ಎ ಕಾಲುವೆ ಬದಲು ಬಸವೇಶ್ವರ ಏತ ನೀರಾವರಿ ಜಾರಿಗೊಳಿಸಲಾಗುತ್ತದೆ.
  ಕೊರೊನಾ ಸಂಕಷ್ಟ ಸಮಯದಲ್ಲಿ ಉತ್ತಮ ಜನಪರ ಬಜೆಟ್ ನೀಡಿ, ರಾಜ್ಯ ಸರ್ಕಾರ ಅತ್ಯುತ್ತಮ ಬಜೆಟ್ ಮಂಡಿಸಿದ ಪ್ರಶಂಸೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು ಹಾಗೂ ಎಲ್ಲಾ ಸಮುದಾಯ ಮೆಚ್ಚುವಂತಹ ಉತ್ತಮ ಆಡಳಿತ ನೀಡಲಾಗುತ್ತಿದೆ. ಅತ್ಯುತ್ತಮ ಆಡಳಿತ ನಿರ್ವಹಿಸುತ್ತಿದ್ದರೂ, ವಿರೋಧ ಪಕ್ಷಗಳು ವಿನಾಕಾರಣ ಟೀಕೆ ಮಾಡುತ್ತಿರುವುದು ಸರಿಯಲ್ಲ. ಮಸ್ಕಿ ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಅವರ ಗೆಲುವು ನಿಶ್ಚಿತವೆಂದರು. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರತಾಪಗೌಡ ಪಾಟೀಲ್ ಅವರು ರಾಜ್ಯ ಸಂಪುಟ ಸಚಿವರಾಗಲಿದ್ದಾರೆನ್ನುವುದು ಮತದಾರರಿಗೆ ಮನವರಿಕೆಯಿದ್ದ ಕಾರಣ ಪ್ರತಾಪಗೌಡ ಪಾಟೀಲ್ ಅವರಿಗೆ ಮತ ನೀಡಿ ಗೆಲ್ಲಿಸುತ್ತಾರೆಂಬ ಭರವಸೆ ವ್ಯಕ್ತಪಡಿಸಿದರು.
  ಪಕ್ಷದ ಉಪಾಧ್ಯಕ್ಷರಾದ ವಿಜಯೇಂದ್ರ ಬಸವ ಕಲ್ಯಾಣ ಕ್ಷೇತ್ರದಲ್ಲಿ ನಿಲ್ಲುವ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರ ಅವರು, ಬಸವಕಲ್ಯಾಣ ಚುನಾವಣೆಗೆ ನಿಲ್ಲುವುದಿಲ್ಲ. ಮೈಸೂರು ಭಾಗದಲ್ಲಿ ಮನೆ ಮಾಡಿ, ಅಲ್ಲೇ ಪಕ್ಷದ ಕಾರ್ಯಕ್ರಮಗಳನ್ನು ಮಾಡಿ, ಸಾಧ್ಯವಾದರೇ ವರುಣಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸಲಿದ್ದಾರೆ. ಬಸವ ಕಲ್ಯಾಣದಲ್ಲೂ ನಮ್ಮ ಪಕ್ಷ ಗೆಲ್ಲಲಿದೆ. ಬೆಳಗಾವಿ ಲೋಕಸಭಾ ಚುನಾವಣೆ ಬಿಜೆಪಿ ಗೆಲುವು ಖಚಿತವೆಂದರು. ಅಭ್ಯರ್ಥಿಗಳ ಪಟ್ಟಿ ದೆಹಲಿಗೆ ಕಳುಹಿಸಲಾಗಿದೆ. ನಾಳೆ ಪಟ್ಟಿ ಅಂತಿಮಗೊಳ್ಳಲಿದೆ.
  ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪಕ್ಷದ ಉಪಾಧ್ಯಕ್ಷರಾದ ವಿಜಯೇಂದ್ರ, ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಎಂ.ದೊಡ್ಡಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.