ಟಿಎಪಿಸಿಎಂಎಸ್ ಚುನಾವಣೆ 21 ನಾಮಪತ್ರ ಸಲ್ಲಿಕೆ: ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರು ನಾಮಪತ್ರ ಸಲ್ಲಿಕೆ ಆಕ್ಷೇಪ

ಮುದ್ದೇಬಿಹಾಳ:ನ.7: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸದಸ್ಯರ ಆಯ್ಕೆಗೆ ಚುನಾವಣೆಗೆ ಒಟ್ಟು 21 ನಾಮಪತ್ರಗಳು ಸಲ್ಲಿಕೆಯಾಗಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರು ನಾಮ ಪತ್ರ ಸ್ವೀಕರಿಸಿದ ಚುನಾವಣಾಧಿಕಾರಿ ಕ್ರಮಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ವರ್ಗದಿಂದ ವಿಠ್ಠಲ ಸಿಂಗ ಹಜೇರಿ, ಬಸನಗೌಡ ಬಸರಕೋಡ, ಗುರುಸ್ವಾಮಿ ಬೂದಿಹಾಳಮಠ, ಪ್ರಕಾಶ ಪಾಟೀಲ, ಬಸನಗೌಡ ಮಾಡಗಿ, ಸುರೇಶ ಮಾಲಗತ್ತಿ, ಶಾಂತಗೌಡ ಬಿರಾದಾರ, ಗುರುಬಸಪ್ಪ ಹಿಪ್ಪರಗಿ, ಹಿಂದುಳಿದ ಎ ವರ್ಗದಿಂದ ಮಲ್ಲನಗೌಡ ಬಿರಾದಾರ, ಮುತ್ತಣ್ಣ ಮುತ್ತಣ್ಣವರ, ಗಂಗಾರಾಮ ಬಿಜಾಪೂರ, ಹಿಂದುಳಿದ 2 ವರ್ಗದಿಂದ ಪ್ರಭಾಕರ ಯಾಳವಾರ, ನಿಂಗನಗೌಡ ಗುರಡ್ಡಿ, ಎಸ್‍ಸಿ ವರ್ಗದಿಂದ ಚಿದಾನಂದ ಸೀತಿಮನಿ, ರಾಮಪ್ಪ ಕಟ್ಟಿಮನಿ, ಎಸ್‍ಟಿ ವರ್ಗದಿಂದ ಗುರಣ್ಣ ಹತ್ತೂರ, ಮಹಿಳಾ ವರ್ಗದಿಂದ ಚನ್ನಮ್ಮ ಲಕ್ಕುಂಡಿ, ಲಕ್ಷ್ಮೀಬಾಯಿ ಹಡ್ಲಗೇರಿ, ಶೋಭಾ ಜಮ್ಮಲದಿನ್ನಿ, ಶ್ರೀದೇವಿ ಮಾಲಗತ್ತಿ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ ಹಾಗೂ ನಿರ್ದೇಶಕರಾಗಿದ್ದ ಮನೋಹರ ಮೇಟಿ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೂ ಅವರ ನಾಮಪತ್ರಗಳನ್ನು ಸ್ವೀಕರಿಸಿದ್ದ ಚುನಾವಣಾಧಿಕಾರಿ ಸಂತೋಷ ಇಲಕಲ್ ಅವರು, ರಜಿಸ್ಟರ್‍ನಲ್ಲಿ ಅವರ ಸಹಿಯನ್ನೂ ಪಡೆದುಕೊಂಡಿದ್ದರು.ಈ ವಿಷಯ ತಿಳಿದ ಇತರೆ ಸದಸ್ಯರು ಮದ್ಯಾಹ್ನ 3 ಗಂಟೆ ಹೊತ್ತಿಗೆ ಅಂತಿಮವಾಗಿ ನಾಮಪತ್ರ ಸಲ್ಲಿಸಿದವರ ವಿವರವನ್ನು ಬಹಿರಂಗಪಡಿಸಬೇಕು ಎಂದು ಚುನಾವಣಾ ಅಧಿಕಾರಿ ಜೋತೆ ವಾಗ್ವಾದ ನಡೆಸಿದರು.
ಚುನಾವಣಾಧಿಕಾರಿ 4 ಗಂಟೆಗೆ ನಾಮಪತ್ರ ಸಲ್ಲಿಸಿದವರ ವಿವರವನ್ನು ನೋಟಿಸ್ ಬೋರ್ಡ್‍ಗೆ ಲಗತ್ತಿಸಲು ಸಂಘದ ಸಿಬ್ಬಂದಿಗೆ ತಿಳಿಸಿದರು. ನಮ್ಮ ನಾಮಪತ್ರಗಳನ್ನು ಸ್ವೀಕರಿಸುವ ವೇಳೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂದು ಎರಡೆರಡು ಸಲ ಪರಿಶೀಲನೆ ನಡೆಸಿ ನಾಮಪತ್ರ ಸ್ವೀಕರಿಸಿದ್ದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಇಬ್ಬರು ನಾಮಪತ್ರಗಳನ್ನು ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೂ ಕಣ್ಣುಮುಚ್ಚಿ ಸ್ವೀಕರಿಸಿರುವುದರ ಹಿಂದಿನ ಮರ್ಮವೇನು? ಚುನಾವಣಾಧಿಕಾರಿ ಯಾರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ? ಎಂದು ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.