ಟಿಎಪಿಸಿಎಂಎಸ್ ಆಡಳಿತ ಕಾಂಗ್ರೆಸ್ ಮಡಿಲಿಗೆ

ಹರಪನಹಳ್ಳಿ.ನ.೧೫; ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಪ್ರೇಮಕುಮಾರಗೌಡ ಹಾಗೂ ಉಪಾಧ್ಯಕ್ಷರಾಗಿ ತಳವಾರ ಮಂಜಪ್ಪ ಆಯ್ಕೆಯಾಗಿದ್ದಾರೆ.

ಪಟ್ಟಣದ ಟಿಎಪಿಸಿಎಂಎಸ್ ಸಹಕಾರಿ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಪ್ರೇಮಕುಮಾರಗೌಡ ಮತ್ತು ಬಿ.ಕೆ.ಪ್ರಕಾಶ್, ಉಪಾಧ್ಯಕ್ಷ ಸ್ಥಾನಕ್ಕೆ ತಳವಾರ ಮಂಜಪ್ಪ ಹಾಗೂ ಯು.ಹನುಮಂತಪ್ಪ ಅವರು ನಾಮಪತ್ರ ಸಲ್ಲಿಸಿ ಸಲ್ಲಿಸಿದ್ದರು. ಪಿ.ಪ್ರೇಮಕುಮಾರಗೌಡ-೯ ಮತಗಳು, ಬಿ.ಕೆ.ಪ್ರಕಾಶ್-೬ ಮತಗಳು, ಉಪಾಧ್ಯಕ್ಷ ತಳವಾರ ಮಂಜಪ್ಪ-೯ ಮತಗಳು, ಯು.ಹನುಮಂತಪ್ಪ-೬ ಮತಗಳು ಚಲಾವಣೆಯಾಗಿದ್ದು, ಹೆಚ್ಚು ಮತ ಪಡೆದ ಪಿ.ಪ್ರೇಮಕುಮಾರಗೌಡ ಹಾಗೂ ತಳವಾರ ಮಂಜಪ್ಪ ಅಧ್ಯಕ್ಷರು-ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕರಾಗಿರುವ ಚುನಾವಣಾದಿಕಾರಿ ಮಂಜುನಾಥ ಗೊಂಧಿ ಘೋಷಿಸಿದರು.

ತಾರಕ್ಕೇರಿದ ಬಣ ರಾಜಕಾರಣ

ಟಿಎಪಿಸಿಎಂಎಸ್ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು ೧೪ ಜನ ಸದಸ್ಯರು ಆಯ್ಕೆಯಾಗುವ ಮೂಲಕ ಕ್ಲೀನ್‌ಸ್ವೀಪ್ ಮಾಡಿದೆ. ಬಿಜೆಪಿ ಪಕ್ಷ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದೊಳಗೆ ಬೇಗುದಿ ಶುಕ್ರವಾರ ಕೂಡ ಹೊರಮ್ಮಿದ್ದು, ಕಾಂಗ್ರೆಸ್ ಕಾರ್ಯಕರ್ತರ ಬಣ ರಾಜಕಾರಣ ಮತ್ತೊಮ್ಮೆ ಬಹಿರಂಗಗೊಂಡಿತು. 

 ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಬಣದಲ್ಲಿ ಗುರುತಿಸಿಕೊಂಡಿರುವ ಪಿ.ಪ್ರೇಮಕುಮಾರಗೌಡ ಅಧ್ಯಕ್ಷ ಸ್ಥಾನಕ್ಕೆ ಹಾಗೂ ತಳವಾರ ಮಂಜಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಪಿಟಿಪಿ ಬಣಕ್ಕೆ ಸೆಡ್ಡು ಹೊಡೆದ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ನಿರ್ದೇಶಕ ಬಿ.ಕೆ.ಪ್ರಕಾಶ್ ಹಾಗೂ ಯು.ಹನುಮಂತಪ್ಪ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆ ಕಾವೇರುವಂತೆ ಮಾಡಿದರು. ಕಾಂಗ್ರೆಸ್ ಪಕ್ಷದ ನಿರ್ದೇಶಕರ ನಡುವೆಯೇ ಪೈಪೋಟಿ ನಡೆದು ಅಂತಿಮವಾಗಿ ಪಿ.ಟಿ.ಪರಮೇಶ್ವರನಾಯ್ಕ ಬಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.  

ಚುನಾವಣೆ ಆರಂಭದಲ್ಲಿ ಎಲ್ಲರನ್ನು ಕರೆದು ಅಭ್ಯರ್ಥಿಗಳ ಆಯ್ಕೆ ಮಾಡಿದರು. ಗೆಲುವಿನ ನಂತರ ನಮ್ಮನ್ನು ಯಾರು ಮಾತನಾಡಿಸಲಿಲ್ಲ, ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡು ೧೪ ಜನ ನಿರ್ದೇಶಕರಲ್ಲಿ ೯ ಜನ ನಿರ್ದೇಶಕರನ್ನು ಪ್ರವಾಸಕ್ಕೆ ಕಳಿಸಿದ್ದಾರೆ. ನಮ್ಮ ಗಮನಕ್ಕೆ ಇಲ್ಲದಂತೆ ಆಯ್ಕೆ ಪ್ರಕ್ರಿಯೆ ನಡೆಸುವ ಮೂಲಕ ಭಿನ್ನಮತ ಅವರೇ ಸೃಷ್ಠಿ ಮಾಡಿದ್ದಾರೆ. ಎಲ್ಲಾರೂ ಒಂದೇ ಎನ್ನುವ ಅವರೇ ತಾರತಮ್ಯ ಮಾಡಿದ್ದಾರೆ. ಇಲ್ಲಿನ ಸಮಸ್ಯೆನ್ನು ಹೈಕಮಾಂಡ್ ಮನಗಂಡು ಬಗೆಹರಿಸಿದರೆ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಎಂದು ಪರಾರ್ಜಿತ ಅಭ್ಯರ್ಥಿಯಾಗಿರುವ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಒಳ ಜಗಳ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಗುಂಪು ಕಟ್ಟಿಕೊಂಡು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಚುನಾವಣೆ ನಂತರ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ಜಿಪಂ ಸದಸ್ಯ ಎಚ್.ಬಿ.ಪರುಶುರಾಮಪ್ಪ, ಟಾಸ್ಕ್ ಪೋರ್ಸ್ ಸಮಿತಿ ಜಿಲ್ಲಾ ಸದಸ್ಯ ಶಶಿಧರ ಪೂಜಾರ್, ತಾಲ್ಲೂಕು ಅಧ್ಯಕ್ಷ ಹೆಚ್.ಕೆ.ಹಾಲೇಶ್, ಮುಖಂಡರಾದ ಎಂ.ರಾಜಶೇಖರ್, ಕಮ್ಮತ್ತಳ್ಳಿ ಎಸ್.ಮಂಜುನಾಥ, ಎಂ.ಅಜ್ಜಣ್ಣ, ಮುತ್ತಿಗಿ ಜಂಬಣ್ಣ, ಎಂ.ಟಿ.ಬಸವನಗೌಡ, ಪಿ.ಟಿ.ಭರತ್, ನಂದಿಬೇವೂರು ಅಶೋಕ್, ಪುರಸಭೆ ಸದಸ್ಯರಾದ ಎಸ್.ಜಾಕೀರ್‌ಹುಸೇನ್ ಸರ್ಖಾವಾಸ್, ಲಾಟಿ ದಾದಪೀರ್, ಜೋಗಿನರ ಭರತೇಶ್, ತಿಮ್ಮಾನಾಯ್ಕ, ಬಾಣದ ಅಂಜಿನಪ್ಪ, ಅರುಣ್ ಪೂಜಾರ್, ಎಲ್.ಬಿ.ಹಾಲೆಶನಾಯ್ಕ, ಡಿ.ನೇಮ್ಯಾನಾಯ್ಕ, ಪಿ.ವೇದನಾಯ್ಕ, ಚಿರಸ್ತಹಳ್ಳಿ ಪಿ.ಮರಿಯಪ್ಪ, ಯರಬಳ್ಳಿ ಉಮಾಪತಿ, ಅಲಮರಸೀಕೆರೆ ಪರಶುರಾಮ, ಪಿ.ಪರಶುರಾಮ, ರಿಯಾಜ್ ಆಹ್ಮದ್ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕರು ಇದ್ದರು.