ಟಿಎಪಿಸಿಎಂಎಸ್:ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಬಿಜೆಪಿ ಹುನ್ನಾರ

ಕಲಬುರಗಿ,ಅ.29-ತಾಲ್ಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್)ದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರ ಚುನವಣೆಯಲ್ಲಿ ಬಿಜೆಪಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದೆ ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನ.5 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅ.29 ಕೊನೆಯದಿನವಾಗಿದೆ. ಈ ಮೊದಲು ಮತದಾರರ ಪಟ್ಟಿಯಲ್ಲಿದ್ದ 1466 ಜನ ಸದಸ್ಯರ ಪೈಕಿ 1195 ಸದಸ್ಯರನ್ನು ತೆಗೆದು ಹಾಕಿ ಕೇವಲ 271 ಸದಸ್ಯರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಆ ಮೂಲಕ ಟಿಎಪಿಸಿಂ ಅನ್ನು ತನ್ನ ವಶದಲ್ಲಿಟ್ಟುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರ ಕುಟುಂಬದ ಸದಸ್ಯರು, ಅವರ ನೌಕರ ವರ್ಗದವರು ಮತ್ತು ಬಿಜೆಪಿಯ ಕೆಲ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮುಂದುವರಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯಾರನ್ನೂ ಸಹ ಮತದಾರರ ಪಟ್ಟಿಯಲ್ಲಿ ಉಳಿಸಿಕೊಂಡಿಲ್ಲ. ನಾನು ಸಂಘದ ಸಂಸ್ಥಾಪಕ ಅಧ್ಯಕ್ಷನಾಗಿದ್ದರೂ ನನ್ನ ಹೆಸರನ್ನು ಸಹ ತೆಗೆದು ಹಾಕಲಾಗಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ 1466 ಜನ ಸದಸ್ಯರಿದ್ದರೂ ಆದರೆ ಈ ಬಾರಿ ಎಲ್ಲ 1195 ಸದಸ್ಯರನ್ನು ತೆಗೆದು ಹಾಕಿ 271 ಜನ ಸದಸ್ಯರನ್ನು ಮಾತ್ರ ಉಳಿಸಿಕೊಂಡು ಚುನಾವಣೆ ನಡೆಸಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದೆ ಎಂದರು.
ಸರ್ಕಾರದ ಈ ನಡೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕೆಂದರು ಸಮಯವಿಲ್ಲ, ಕೊರೊನಾ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ರಜೆ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಅಸಾಯಕತೆ ವ್ಯಕ್ತಪಡಿಸಿದರು.
ಸರ್ಕಾರದ ಈ ದುಸ್ಸಾಹಾಸ ಅತ್ಯಂತ ಖಂಡನೀಯವಾಗಿದೆ ಎಂದ ಅವರು ಇದರ ವಿರುದ್ಧ ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆಯನ್ನು ನಡೆಸುವುದಾಗಿ ಹೇಳಿದರು.
ಜಿ.ಪಂ.ಮಾಜಿ ಸದಸ್ಯರಾದ ತುಕಾರಾಮ ಪಾಟೀಲ, ಮತೀನ್ ಪಟೇಲ್, ಪ್ರಶಾಶ ಜಮಾದಾರ, ಮುಖಂಡರಾದ ಮಹಾಂತೇಶ ಪಾಟೀಲ, ಸಿದ್ದು ಸಿರಸಗಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.