ಟಿಇಸಿ ಹಗರಣ: ದಾಖಲೆ ಸಲ್ಲಿಸಿದ ರಮೇಶ್

ಬೆಂಗಳೂರು, ಸೆ.೭- ಬಿಬಿಎಂಪಿಯ ಸಂಚಾರಿ ಇಂಜಿನಿಯರಿಂಗ್ ಕೋಶದಲ್ಲಿ (ಟಿಇಸಿ) ನಡೆದಿರುವ ಹಗರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬೆಂ. ದಕ್ಷಿಣ ಜಿಲ್ಲೆಯ ಅಧ್ಯಕ್ಷ ಎನ್.ಆರ್.ರಮೇಶ್ ಸಲ್ಲಿಕೆ ಮಾಡಿದ್ದಾರೆ
ರಸ್ತೆ ಹಾಗೂ ಪಾದಚಾರಿ ಸುರಕ್ಷತಾ ಕಾಮಗಾರಿಗಳನ್ನು ನಿರ್ವಹಿಸುವುದು ಟಿ.ಇ.ಸಿ ಜವಾಬ್ದಾರಿ. ೨೦೧೬-೧೭ ಮತ್ತು ೨೦೧೭-೧೮ನೇ ಸಾಲುಗಳಲ್ಲಿ ೧೧೯ ಕೋಟಿ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಾಗಿ ಟಿಇಸಿ ಹೇಳಿದ್ದು, ೧೦೮ ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ.
ಆದರೆ, ನಗರದ ೧,೪೦೦ ಕಿ.ಮೀ ಉದ್ದದ ಮುಖ್ಯ ರಸ್ತೆಗಳಲ್ಲಿ ಶೇ ೨೦ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಟಿಇಸಿ ೬೫ ಕೋಟಿ ಮೊತ್ತದ ೭೧ ಕಾಮಗಾರಿಗಳನ್ನು ಕಾನೂನುಬಾಹಿರವಾಗಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್) ವಹಿಸಿದೆ. ಘಟಕದ ಇಂಜಿನಿಯರ್‌ಗಳು ರಾಜಕಾರಣಿಗಳಿಗೆ ಆಪ್ತರಾಗಿರುವ ಗುತ್ತಿಗೆದಾರರಿಗೆ ಇವುಗಳ ಉಪಗುತ್ತಿಗೆ ಸಿಗುವಂತೆ ನೋಡಿಕೊಂಡಿದ್ದಾರೆ.
೫೪ ಕೋಟಿ ಮೊತ್ತದ ಕಾಮಗಾರಿಗಳನ್ನು ತಮ್ಮ ಆಪ್ತ ಗುತ್ತಿಗೆದಾರರಿಗೇ ನೀಡಿದ್ದಾರೆ’ ಎಂದು ದೂರಲಾಗಿತ್ತು. ಈ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದರು.
ಅವ್ಯವಹಾರ ನಡೆದಿದೆ ಎಂದು ಬಿಬಿಎಂಪಿಯ ತಾಂತ್ರಿಕ ಹಾಗೂ ಜಾಗೃತ ಕೋಶವು (ಟಿವಿಸಿಸಿ) ವರದಿ ನೀಡಿತ್ತು. ಈ ಪ್ರಕರಣವನ್ನು ಎಸಿಬಿಗೆ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾಲಿಕೆಯ ಆಯುಕ್ತರಿಗೆ ೨೦೧೯ರ ಅಕ್ಟೋಬರ್‌ನಲ್ಲಿ ನಿರ್ದೇಶನ ನೀಡಿದ್ದರು.
ಟಿವಿಸಿಸಿ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿದ ಆಯುಕ್ತರು, ಈ ಹಗರಣವನ್ನು ಎಸಿಬಿ ತನಿಖೆಗೆ ವಹಿಸುವಂತೆ ಸೂಚಿಸಿದ್ದರು.
ಅದರಂತೆ ತನಿಖೆ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ರಮೇಶ್ ಸಲ್ಲಿಕೆ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಎನ್.ಆರ್. ರಮೇಶ್, ಈ ಹಗರಣಕ್ಕೆ ಸಂಬಂಧಿಸಿದಂತೆ ಆ.೯ ರಂದು ಮೇಯರ್ ಅಧ್ಯಕ್ಷತೆಯಲ್ಲಿ ಟಿವಿಸಿಸಿಯು ನೀಡಿರುವ ವರದಿಯ ಕುರಿತು ಚರ್ಚಿಸಲಾಗಿದ್ದು, ಅಕ್ರಮಗಳ ಬಗ್ಗೆ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ
ಮುಖ್ಯ ಅಭಿಯಂತರರು, ಟಿಇಸಿ ವಿಭಾಗದ ಹಿಂದಿನ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ೬ ಮಂದಿ ಹಿರಿಯ ಅಧಿಕಾರಿಗಳು ಇನ್ನು ಸಹಿಗಳನ್ನು ಹಾಕಿದ್ದಾರೆ ಎಂದರು.
ಇದರಿಂದ ಅಧಿಕೃತ ಸಭೆಯಲ್ಲಿ ಟಿಇಸಿ ವಿಭಾಗದ ಕೆಲವೊಂದು ಅಕ್ರಮಗಳ ಬಗ್ಗೆಗಿನ ನಡಾವಳಿಗೆ ಇಷ್ಟು ಸಹಿಗಳನ್ನು ಹಾಕುವ ಮೂಲಕ ತಮ್ಮ ತಪ್ಪುಗಳ ಬಗ್ಗೆ ಒಪ್ಪಿಕೊಂಡಿರುವಂತೆ ಆಗಿದ್ದು, ಹಾಲಿ ಮುಖ್ಯ ಅಭಿಯಂತರ ಬಿ.ಎಸ್ ಪ್ರಹ್ಲಾದ್ ಹಾಗೂ ಟಿಇಸಿ ವಿಭಾಗದ ಕಾರ್ಯಪಾಲಕ ಅಭಿಯಂತ ಪ್ರವೀಕ್ ಲಿಂಗಯ್ಯ ಸೇರಿದಂತೆ ಎಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ಮತ್ತೊಂದು ಪ್ರಕರಣವನ್ನುದಾಖಲಿಸಿ ಕೊಂಡು, ಕ್ರಮ ಜರುಗಿಸುವಂತೆ ಆಗ್ರಹಿಸಿದರು.