
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಜು,2- ಕುಡಿಯುವ ನೀರು, ಶೌಚಾಲಯ ಹಾಗೂ ರಸ್ತೆ ಅಭಿವೃದ್ಧಿಯಂತಹ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಟಾಸ್ಕ್ ಫೋರ್ಸ್ ಕ್ರಿಯಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿನ 17ನೇ ವಾರ್ಡಿನ ಎಲೆಮಟ್ಟಿ ಓಣಿ, 18ನೇ ವಾರ್ಡಿನ ಹಳೆ ಬಳ್ಳಾರಿ ರಸ್ತೆ, 3 ನೇ ವಾರ್ಡಿನ ಸಾರ್ವಜನಿಕ ಶೌಚಾಲಯ ಅವರಣ ಹಾಗೂ 12ನೇ ವಾರ್ಡಿನ ನೆಲ ಅಮರೇಶ್ವರ ದೇವಸ್ಥಾನದ ಹತ್ತಿರದ ಕೊಳವೆ ಬಾವಿಗಳನ್ನು ಪುನಃಶ್ಚೇತನ ಮಾಡಿಸುವುದಕ್ಕೆ 4.19 ಲಕ್ಷ ವೆಚ್ಚದ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಯಿತು.
ತಾಲ್ಲೂಕು ಟಾಸ್ಕ್ ಫೋರ್ಸ್ ಕ್ರಿಯಾ ಸಮಿತಿ ಕಾರ್ಯದರ್ಶಿ ಹಾಗೂ ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ, ಪಟ್ಟಣ ಪಂಚಾಯಿತಿ ಇಂಜನಿಯರ್ ಸುನಂದ, ಸಿಬ್ಬಂದಿ ಶೋಭಾ, ಅನ್ನ ಪೂರ್ಣ, ಅರುಣ್ ಕುಮಾರ್, ಹಸೇನ್ ಭಾಷ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು.