ಟಾಕಳೆ ವಿರುದ್ಧ ಅತ್ಯಾಚಾರ ಸೇರಿ‌ 10 ಕೇಸ್ ದಾಖಲಿಸಿದ ಚನ್ನಪಟ್ಟಣದ ‌ಯುವತಿ‌

ಬೆಳಗಾವಿ, ಜು.25- ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಅವರ ವಿರುದ್ಧ ಅತ್ಯಾಚಾರ ಸೇರಿ10 ಪ್ರಕರಣಗಳನ್ನು ದಾಖಲಿಸಿರುವ ಚನ್ನಪಟ್ಟಣ ಮೂಲದ ಯುವತಿಯು ಇಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.
ನಗರದ ಎಪಿಎಂಸಿ ಪೊಲೀಸ್‌ ಠಾಣೆಗೆ ಹಾಜರಾದ ಯುವತಿಯನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿ ಪ್ರಕರಣಗಳ ಹೇಳಿಕೆ ದಾಖಲಿಸಿದ್ದಾರೆ.
ರಾಜಕುಮಾರ ಟಾಕಳೆ ವಿರುದ್ಧ ಯುವತಿಯು ಬರೋಬ್ಬರಿ 10 ವಿವಿಧ ಕಲಂಗಳ ಅಡಿ ಅತ್ಯಾಚಾರ (ಐಪಿಸಿ ಸೆಕ್ಷಣ್‌ 376), ಅಪಹರಣ (ಐಪಿಸಿ 366), ಗರ್ಭಪಾತ ಮಾಡಿಸಿದ್ದು (312), ‌ವಂಚನೆ (420), ಮಹಿಳೆ ಮೇಲೆ ಹಲ್ಲೆ (354), ಅವಾಚ್ಯವಾಗಿ ನಿಂದಿಸುವುದು (ಐಪಿಸಿ 504), ಜೀವ ಬೆದರಿಕೆ (506), ಗೌರವಕ್ಕೆ ಧಕೆ ತರುವುದು (509) ಹಾಗೂ ಖಾಸಗಿತನಕ್ಕೆ ಧಕ್ಕೆ (ಐಟಿ ಆ್ಯಕ್ಟ್‌ 66ಇ), ಲೈಂಗಿಕ ಪ್ರಚೋದನಕಾರಿ ವಿಡಿಯೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ (67ಎ) ಕೇಸ್‌ಗಳನ್ನು ದಾಖಲಿಸಿದ್ದಾರೆ.
ಯುವತಿಯ ಖಾಸಗಿತನ ವಿಡಿಯೊಗಳು ಕಳೆದ 15 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಆರೋಪ ಹೊತ್ತಿರುವ ರಾಜಕುಮಾರ ಟಾಕಳೆ ಅವರು, 2018ರಲ್ಲಿ ಸಚಿವರಾಗಿದ್ದ ಶ್ರಿಮಂತ ಪಾಟೀಲ ಅವರ ಆಪ್ತ ಸಹಾಯಕರಾಗಿದ್ದರು. ಆ ಸಂದರ್ಭದಲ್ಲಿ ಯುವತಿಯೊಂದಿಗೆ ಸಖ್ಯ ಬೆಳೆದಿತ್ತು ಎಂಬ ವಿಷಯಗಳನ್ನು ಪೊಲೀಸರು ತಿಳಿಸಿದ್ದಾರೆ.
ನನ್ನನ್ನು ಯಾಮಾರಿಸಿ ವಿವಾಹವಾದ
‘ರಾಜಕುಮಾರ ಈಗ ನನ್ನ ವಿರುದ್ಧವೇ ‘ಸುಳ್ಳು ಅತ್ಯಾಚಾರದ ಬೆದರಿಕೆ ಹಾಗೂ ಹಣ ಕೇಳುತ್ತಿದ್ದೇನೆ’ ಎಂದು ಕಳೆದ ಜುಲೈ 18ರಂದು ದೂರು ನೀಡಿದ್ದಾರೆ. ಇದರ ವಿಚಾರಣೆಗೂ ನಾನು ಪೊಲೀಸರಿಗೆ ಸಹಕರಿಸಿದ್ದೇನೆ.
ನನಗೆ ಆದ ಅನ್ಯಾಯದ ವಿರುದ್ಧವೂ ಜುಲೈ 23ರಂದು ಪ್ರತಿ ದೂರು ದಾಖಲಿಸಿದ್ದೇನೆ. ಅದರ ವಿಚಾರಣೆಗೆ ಹಾಜರಾಗಲು ಬಂದಿದ್ದೇನೆ’ ಎಂದು ಯುವತಿಯು‌ ಪತ್ರಕರ್ತರಿಗೆ ತಿಳಿಸಿದರು.
ರಾಜಕುಮಾರ್ ‌ಟಾಕಳೆಯು ‘ನನ್ನ ಮದುವೆಯಾಗಿದೆ ಎಂದು ಗೊತ್ತಿದ್ದೂ ಯುವತಿ ನನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆದರು. ಈಗ 50 ಲಕ್ಷ ಹಣ ಕೊಡಬೇಕು, ಇಲ್ಲದಿದ್ದರೆ ಅತ್ಯಾಚಾರದ ಕೇಸ್‌ ಹಾಕುವುದಾಗಿ ಹೆದರಿಸುತ್ತಿದ್ದಾರೆ. ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಕ್ರಮ ಜರುಗಿಸಬೇಕು ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕು’ ಎಂದು ರಾಜಕುಮಾರ ಮುಂಚಿತವಾಗಿಯೇ ಎಫ್‌ಐಆರ್‌ ದಾಖಲು ಮಾಡಿದ್ದಾರೆ.
ಯುವತಿ ವಿರುದ್ಧ ಐಪಿಸಿ 1860 (U/s 384, 448, 504, 506, 34) ಕಲಂ ಅಡಿ ಕೇಸ್ ದಾಖಲಿಸಿದ್ದಾರೆ.
‘ನಾನು ಎಲ್ಲ ವಿಚಾರಣೆಗೂ ಸಹಕರಿಸುತ್ತೇನೆ. ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಇಂಥವರ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇನೆ’ ಎಂದೂ ಯುವತಿ ಹೇಳಿದರು.