ಬೆಂಗಳೂರು,ಏ.೨೪- ಅನಾರೋಗ್ಯ ಕಾರಣದಿಂದ ಟಪೋರಿ ಸಿನಿಮಾ ಖ್ಯಾತಿಯ ಸತ್ಯ ನಿಧನರಾಗಿದ್ದಾರೆ.
ಕನ್ನಡದ ಕಿರುತೆರೆ ಬೆಳ್ಳಿ ಪರದೆ ಮೇಲೆ ಮಿಂಚಿದ್ದ ಸತ್ಯ ಟಪೋರಿ ಸಿನಿಮಾ ಮೂಲಕ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಆದರೆ ಹಲವಾರು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ೪೫ ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಸತ್ಯ ಅವರು ಟಪೋರಿ ಸಿನಿಮಾ ಬಳಿಕ ಲೂಸ್ ಮಾದ ಯೋಗಿ ಅಭಿನಯದ ನಂದ ಲವ್ಸ್ ನಂದಿತಾ ಸಿನಿಮಾ ಸೇರಿದಂತೆ ೩೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ’ಮೇಳ’ ಎನ್ನುವ ಸಿನಿಮಾವನ್ನು ಕೂಡ ಸತ್ಯ ಅವರು ನಿರ್ದೇಶನ ಮಾಡಿದ್ದರು. ಮನೆಗೆ ಆಧಾರವಾಗಿದ್ದ ಸತ್ಯ ಅವರ ನಿಧನದಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಸತ್ಯ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬನಶಂಕರಿ ಮೂರನೇ ಹಂತದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಸಾವಿನ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.