ಟಂಟಂ ಪಲ್ಟಿ: ವೃದ್ಧೆ ಸಾವು, ಐವರಿಗೆ ಗಾಯ

ಕಲಬುರಗಿ,ಫೆ.23-ಜಿಲ್ಲೆಯ ಅಫಜಲಪುರ ಪಟ್ಟಣದ ಹೊರವಲಯದ ಸೊನ್ನ ಕ್ರಾಸ್ ಬಳಿ ಟಂಟಂ ಪಲ್ಟಿಯಾದ ಓರ್ವ ವೃದ್ಧೆ ಸ್ಥಳದಲ್ಲೇ ಮೃತಪಟ್ಟು, ಐವರಿಗೆ ಗಂಭೀರ ಗಾಯಗಳಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತಳನ್ನು ಅಫಜಲಪುರ ಪಟ್ಟಣದ ಕಲ್ಲವ್ವ ಶರಣಪ್ಪ ಪಾಣೆಗಾರ (60) ಎಂದು ಗುರುತಿಸಲಾಗಿದೆ. ಗಾಯಗೊಂಡ ಐವರನ್ನು ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಒಂದೇ ಕುಟುಂಬದ 15 ಜನ ಕೂಲಿ ಕೆಲಸಕ್ಕೆಂದು ಅಫಜಲಪುರ ಪಟ್ಟಣದಿಂದ ಸಿಂದಗಿ ತಾಲ್ಲೂಕಿನ ಕುಮಸಿ ಗ್ರಾಮಕ್ಕೆ ಟಂಟಂನಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.