ಝರಿಗಳ ರಕ್ಷಣೆ ಯುವಜನರ ಹೊಣೆ: ಕಾಶಿನಾಥ ಪಾಟೀಲ

ಬೀದರ:ಮಾ.27: ಬೀದರ್ ನಗರ ಸಂಪೂರ್ಣ ನೀರಿನ ತಳಪಾಯದ ಮೇಲೆ ನಿಂತಿದ್ದು ಎಲ್ಲಿ ಕೊರೆದರೂ ಅಲ್ಲಿ ನೀರು ಸಿಗುವುದು ಕೇವಲ ಬೀದರ್ ನಗರದಲ್ಲಿ. ಹಾಗಾಗಿ ನಮ್ಮಲ್ಲಿರುವ ಯಾತ್ರಾ ಸ್ಥಳಗಳಾದ ಗುರುನಾನಕ ಝರಾ, ಪಾಪನಾಶ ಕೆರೆ, ಶುಕ್ಲತೀರ್ಥ ಝರಿ ಹಾಗೂ ನರಸಿಂಹ ಝರಣಿ ಸೇರಿದಂತೆ ಬೀದರ್‍ನ ಸುತ್ತಮುತ್ತ ಇರುವ ಇತರೆ ಝರಿ ಬಾವಿಗಳ ಸಂರಕ್ಷಣೆ ಮಾಡಿ ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನ ಅವನ್ನು ಶುಚಿಯಾಗಿಸಿಟ್ಟರೆ ಮಳೆಗಾಲದಲ್ಲಿ ಮಳೆ ನೀರಿನಿಂದ ಅವುಗಳು ತುಂಬಿ ಬೀದರ್ ಜನರ ನೀರಿನ ದಾಹ ನಿಲ್ಲಲಿದೆ ಎಂದು ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕಾಶಿನಾಥ ಪಾಟೀಲ ಅಭಿಪ್ರಾಯ ಪಟ್ಟರು.

ನಗರದ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಕಾಳಿಕಾ ದೇವಿ ಮಂದಿರ ಅವರಣದಲ್ಲಿ ನೆಹರು ಯುವ ಕೇಂದ್ರ ಬೀದರ್ ಹಾಗೂ ರೈಜಿಂಗ್ ಹ್ಯಾಂಡ್ ಯುತ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ವೀರಭದ್ರೇಶ್ವರ ಏಜ್ಯುಕೇಶನ್ ಚಾರಿತೇಬಲ್ ಟ್ರಸ್ಟ್‍ಗಳ ಸಂಯುಕ್ತಾಶ್ರಯದಲ್ಲಿ ನೀರಿನ ಸಂರಕ್ಷಣೆ ಹಾಗೂ ಸಂವರ್ಧನೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಲ ನಮ್ಮ ಮೂಲಭೂತ ಹಕ್ಕು. ಅನ್ನ ಇಲ್ಲದಿದ್ದರೂ 21 ದಿನ ಉಪವಾಸ ಬದುಕಬಹುದು. ಆದರೆ, ನೀರಿಲ್ಲದೇ ಒಂದು ದಿನ ಬದುಕಲು ಸಾಧ್ಯವಿಲ್ಲ. ನೀರು ಕೇವಲ ನಮ್ಮ ಆಹಾರದ ಒಂದು ಭಾಗವಾಗಿರದೆ, ಅದು ಔಷಧ ರೂಪದಲ್ಲಿಯೂ ನಮ್ಮ ಶರೀರ ಸಂರಕ್ಷಿಸುತ್ತದೆ. ಹುಟ್ಟಿನಿಂದ ಹಿಡಿದು ಸಾಯುವ ವರೆಗೂ ನಮಗೆ ನೀರೇ ಪಂಚಾಮೃತ. ಅದಕ್ಕಾಗಿ ಅದನ್ನು ಸಂರಕ್ಷಿಸಿ, ಸಂವರ್ಧಿಸುವ ಸಾಮೂಹಿಕ ಪ್ರಯತ್ನ ನಡೆಯಬೇಕೆಂದು ಕರೆ ಕೊಟ್ಟರು.

ಸಪ್ತಗಿರಿ ಕಾಲೇಜಿನ ಉಪನ್ಯಾಸಕ ಅನಿಲ ಜಾಧವ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ನೀರಿನ ದಾಹ ನೀಗಿಸಲು ಗಿಡ ಮರಗಳು ಬೆಳೆಸಬೇಕು. ಅಲ್ಲಲ್ಲಿ ತಗ್ಗುಗಳು ತೋಡಿ, ನೀರು ಸಂಗ್ರಹಣೆಗಾಗಿ ಕೃಷಿ ಹೊಂಡಗಳನ್ನು ತೋಡಬೇಕು. ಮಳೆ ನೀರು ಪೋಲಾಗದ ಹಾಗೆ ಅವನ್ನು ಹಿಡಿದಿಡಲು ಪ್ರತಿ ಮನೆಯಂಗಳದಲ್ಲಿ ನೀರಿನ ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಬೇಕು. ಇದರಿಂದ ಉತ್ತಮ ಪರಿಸರದ ಜೊತೆಗೆ ನಮ್ಮ ಆರೋಗ್ಯವನ್ನು ಸಹ ಶುಚಿಯಾಗಿಸಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನೆಹರು ಯುವ ಕೇಂದ್ರದ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ ಮಾತನಾಡಿ, ಪಾಶ್ಚಾತ್ಯ ದೇಶಗಳಲ್ಲಿ ಒಂದು ಹನಿ ನೀರು ಸಹ ಪೋಲಾಗದ ರೀತಿ ಅವನ್ನು ಸಂಗ್ರಹಿಸುವ ಹಾಗೂ ಶುಚಿಯಾಗಿಸುವ ವಿನೂತನ ಕಾರ್ಯ ಚಟುವಟಿಕೆಗಳು ನಡೆಯುತ್ತವೆ. ಸ್ನಾನದ ನೀರು, ಊಟ ಮಾಡಿ ಕೈ ತೊಳೆದ ನೀರು ಸಹ ಶುದ್ದಿಕರಿಸುವ ಕಾರ್ಯ ನಡೆಯುತ್ತದೆ. ಆ ಕಾರ್ಯ ನಮ್ಮ ದೇಶದಲ್ಲೂ ನಡೆಯಬೇಕು, ಇದರಿಂದ ಜಲಕಂಟಕ ತಪ್ಪಲಿದೆ ಎಂದರು.

ಉಪನ್ಯಾಸಕ ಮಹಾದೇವ ತಾಮ್ಸಳೆ ಹಾಗೂ ಇತರರು ವೇದಿಕೆಯಲ್ಲಿದ್ದರು. ರೈಜಿಂಗ್ ಹ್ಯಾಂಡ್ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸತೀಶ ಬೆಳಕೋಟೆ ಅಧ್ಯಕ್ಷತೆ ವಹಿಸಿದ್ದರು.

ಅಭಿಷೇಕ್ ಭಗವತಿ ಸ್ವಾಗತಿಸಿದರು. ಗೌರವ್‍ಕುಮಾರ ವಂದಿಸಿದರು. ಓಣಿಯ ಯುವಜನರು ಕಾರ್ಯಕ್ರಮದಲ್ಲಿದ್ದರು.