ಝರಾಸಂಗಮ ಮಹಾದ್ವಾರ ಮಾದರಿಯಲ್ಲಿ ಅಮರೇಶ್ವರ ಮಹಾದ್ವಾರ ನಿರ್ಮಾಣ : ಪ್ರತಿಭಟನೆ ಹಿಂಪಡೆದ ಕರವೇ

ಔರಾದ :ಆ.2: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಔರಾದ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣದ ಕಾಮಗಾರಿ ಶೀಘ್ರ ಪ್ರಾರಂಭ ಮಾಡಬೇಕು ಎಂದು ಅನೇಕ ಹೋರಾಟ ನಡೆಸಲಾಗಿದೆ, ಅದರ ಫಲವಾಗಿ ಎಲ್ಲ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಮಹಾದ್ವಾರ ನಕ್ಷೆ, ರೂಪುರೇಷೆ ತಯಾರಿಸಿ ತಿಂಗಳ ಒಳಗಾಗಿ ಮಹಾದ್ವಾರ ನಿರ್ಮಾಣ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದ ಕಾರಣ ಆಗಸ್ಟ್ 02ರ ಔರಾದ ಬಂದ್ ಹೋರಾಟ ಹಿಂಪಡೆಯಲಾಗಿದೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ರಾಜಕುಮಾರ ಏಡವೆ ತಿಳಿಸಿದ್ದಾರೆ.

ಅಮರೇಶ್ವರ ಮತ್ತು ಆಂಜನೇಯ ದೇವಸ್ಥಾನ ಕಮಿಟಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಸದಸ್ಯರಾದ ಬಸವರಾಜ ಚ್ಯಾರೆ, ಶರಣಪ್ಪ ಪಂಚಾಕ್ಷರಿ, ರಾಜಕುಮಾರ ಏಡವೆ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ನೇರೆ ರಾಜ್ಯದ ಝರಾಸಂಗಮ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಮಹಾದ್ವಾರ ವೀಕ್ಷಣೆ ಮಾಡಿ ಅದೇ ಮಾದರಿಯಲ್ಲಿ ಔರಾದ ಶ್ರೀ ಅಮರೇಶ್ವರ ಮಂದಿರ ಮಹಾದ್ವಾರ ನಿರ್ಮಾಣಕ್ಕೆ ಯೋಜನೆ ರೂಪಿಸಿ ಶೀಘ್ರವೇ ಒಂದು ತಿಂಗಳ ಒಳಗಾಗಿ ಕಾಮಗಾರಿ ಪ್ರಾರಂಭಿಸುವುದಾಗಿ ನಿರ್ಮಿತಿ ಕೇಂದ್ರದ ಅಧಿಕಾರಿ ಓಂಕಾರ ಶೆಟಕಾರ ಹಾಗೂ ಅಮೀರ್ ಶೇಕ್ ಅವರು ತಿಳಿಸಿದ್ದಾರೆ.

ಮಹಾದ್ವಾರ ನಿರ್ಮಾಣಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವರೆಗೆ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ, ಪ್ರಸ್ತುತ ದೇವಸ್ಥಾನದ ಖಾತೆಯಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ 1.30 ಕೋಟಿ ಇದ್ದು ಕಾಮಗಾರಿ ಕೈಗೊಳ್ಳಿ ಖರ್ಚಾಗುವ ಅನುದಾನವನ್ನು ಗ್ರಾಮಸ್ಥರು ನೀಡುವುದಾಗಿ ತಿಳಿಸಿದ್ದಾರೆ, ಒಟ್ಟಾರೆಯಾಗಿ ಮಹಾದ್ವಾರ ನಿರ್ಮಾಣ ಅಚ್ಚುಕಟ್ಟಾಗಿ ನಡೆಸಲು ತಿಳಿಸಲಾಗಿದೆ ಎಂದು ಬಸವರಾಜ ದೇಶಮುಖ ತಿಳಿಸಿದರು.