ಜ.7, 101 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವ

ಬೀದರ:ನ.8: ಶ್ರೀ ಸಿದ್ದೇಶ್ವರ ಟ್ರಸ್ಟ್ (ರಿ) ಅಡಿಯಲ್ಲಿ ನಡೆಸಲಾಗುತ್ತಿರುವ “ಅಪ್ನಾ ಘರ್” ಸಂಸ್ಥೆಯ ವತಿಯಿಂದ 2021ರ ಜನವರಿ 7 ರಂದು ನಮ್ಮ ಮಗಳ ಮದುವೆಯ ನಿಮಿತ್ಯ ಅಂದಿನ ದಿನವೇ ಬಸವ ತತ್ವದ ಆಧಾರದ ಮೇಲೆ 101 ಜೋಡಿಗಳ ಮದುವೆಯನ್ನು ಉಚಿತವಾಗಿ ಮಾಡಿಸಲು ಸ್ವಯಂ ಪ್ರೇರಣೆಯಿಂದ ಮೋದಿ ಕುಟುಂಬ ವತಿಯಿಂದ ನಿರ್ಧರಿಸಲಾಗಿದೆ. ಈ ಉಚಿತ ಸಾಮೂಹಿಕ ವಿವಾಹವು ಜಿಲ್ಲೆಯ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಜರುಗುತ್ತದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಶಶಿಕಾಂತ ಮೋದಿ ತಿಳಿಸಿದರು.

ನಿನ್ನೆ ನಗರದ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ಜರುಗಿದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ನಮ್ಮ ಸಂಸ್ಥೆಯು ಅಪ್ನಾ ಘರ್ ಸಂಸ್ಥೆಯಡಿಯಲ್ಲಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ. ಹಲವಾರು ಅನಾಥ ಹಾಗೂ ನಿರ್ಗತಿಕ ಮಕ್ಕಳನ್ನು ಸ್ವಯಂ ಖರ್ಚಿನೊಂದಿಗೆ ಪಾಲನೆ ಪೋಷಣೆ, ಉಚಿತ ಶಿಕ್ಷಣ ಹಾಗೂ ಪ್ರಸಾದ ನಿಲಯ ಆರಂಭಿಸಿ ಅವರ ಸೇವೆ ಮಾಡುತ್ತ ಬರುತ್ತಿದೆ. ಹಿಂದೆ ನಮ್ಮ ತಂದೆಯವರು ಹಲವಾರು ಕಾರ್ಯಗಳನ್ನು ಉಚಿತವಾಗಿ ಮಾಡುತ್ತಿದ್ದರು. ತಂದೆಯವರ ಆಶೀರ್ವಾದ ಹಾಗೂ ಪ್ರೇರಣೆಯೇ ಇಂದು ನಮಗೆ ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡಲು ಸ್ಫೂರ್ತಿ ನೀಡಿದೆ ಎಂದರು.
ಇಂದು ಕೊರೊನಾ ವೈರಸ್ ನಿಮಿತ್ಯ ಜನತೆ ತುಂಬಾ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಸಾಲ ಮಾಡಿ ತಮ್ಮ ಮಕ್ಕಳ ಮದುವೆ ಮಾಡುವ ಸ್ಥಿತಿಯಲ್ಲಿ ಬಡಜನತೆ ಇಲ್ಲ. ಆದ್ದರಿಂದ ಮದುವೆಯಲ್ಲಿ ಬಡವರು ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು, ಒಂದಿಷ್ಟು ಬಡ ವಧು-ವರರಿಗೆ ಸಹಕಾರಿಯಾಗಲೆಂದು ಸರಳ ವಿವಾಹ ಸಮಾರಂಭ ನಡೆಸಲಾಗುತ್ತಿದೆ, ಒಟ್ಟು 101 ಜೋಡಿ ಅಥವಾ ಅದಕ್ಕಿಂತ ಜಾಸ್ತಿ ಬಂದರೂ ಅಂತಹ ವಧು-ವರರಿಗೆ ಮದುವೆ ಮಾಡಿಸಲಾಗುತ್ತದೆ, ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ ರವಿಕೆ ನೀಡುತ್ತೇವೆ, ವರನಿಗೆ ಪಂಚೆ, ಶರ್ಟು, ಪೇಟಾ, ಟಾವೆಲ್, ಹೂವಿನ ಹಾರ ಮತ್ತು ಭಾಸಿಂಗ್‍ಗಳನ್ನು ಉಚಿತವಾಗಿ ನಮ್ಮ ಸಂಸ್ಥೆಯ ವತಿಯಿಂದ ನೀಡುತ್ತೇವೆ. 6) ಈ ಉಚಿತ ಮದುವೆ ಸಮಾರಂಭದಲ್ಲಿ ಯಾವುದೇ ಕಾರಣಕ್ಕೂ ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉಚಿತವಾಗಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ವಧು-ವರರಿಗೆ ವಿವಾಹದ ನಂತರವೂ ಆ ಜೋಡಿಗೆ ಸಾಧ್ಯವಾದಷ್ಟು ಮಟ್ಟಿಗೆ ನೌಕರಿ ಅಥವಾ ವ್ಯಾಪಾರಕ್ಕಾಗಿ ಸಹಕರಿಸಲಾಗುವುದು. ಆದ್ದರಿಂದ ಆಸಕ್ತ ವಧು-ವರರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಟ್ರಸ್ಟ್ ಮಾರ್ಗದರ್ಶಿ ನೀಲಾಕ್ಷಿ ಮೋದಿ ಸಾರ್ವಜನಿಕರಲ್ಲಿ ಮನವಿ ಮಾಡಿರುವರು.
ಭಾಲ್ಕಿಯ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, “ಸಾಮೂಹಿಕ ಉಚಿತ ವಿವಾಹ ಸಮಾಂಭದಲ್ಲಿ ಮದುವೆ ಮಾಡಿಕೊಂಡರೆ ಬಂಧುಗಳ ಎದುರು ಮರ್ಯಾದೆ ಹೋಗುತ್ತದೆ ಎಂಬ ಕೀಳು ಮನೋಭಾವನೆ ಜನತೆ ತಮ್ಮ ಮನಸ್ಸಿನಿಂದ ತೊಲಗಿಸಬೇಕು. ಒಬ್ಬರ ನೋಡಿ ಇನ್ನೊಬ್ಬರು ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಕೆಟ್ಟ ಸಂಸ್ಕøತಿ ಈ ಸಮಾಜದಿಂದ ತೊಲಗಬೇಕು ಎಂಬ ಉದ್ದೇಶದಿಂದ ಶಶಿಕಾಂತ ಮೋದಿಯವರು ತಮ್ಮ ಮಗಳ ಮದುವೆ ನಿಮಿತ್ಯ 108 ಜನರಿಗೆ ಉಚಿತ ಮದುವೆ ಮಾಡಿಸುತ್ತಿರುವ ಕಾರ್ಯ ಮಾದರಿಯಾದುದು. ಮಠ-ಮಾನ್ಯಗಳು ಮಾಡುವ ಕಾರ್ಯ ಇಂದು ಮೋದಿಯವರು ಸಂಸಾರದಲ್ಲಿದ್ದುಕೊಂಡು ಮಾಡುತ್ತಿರುವುದು ಶ್ಲಾಘನೀಯ. ಬಸವಣ್ಣನವರ ಆಶಯಗಳನ್ನು ನಿಜವಾಗಿಯೂ ಈಡೇರಿಸುತ್ತಿರುವುದು ಮೋದಿ ಕುಟುಂಬ. ಆದ್ದರಿಂದ ಅವರಿಗೆ ಸಭೀಕರು ಸಹಕಾರ ನೀಡುವುದು ಅತ್ಯಗತ್ಯವಾಗಿದೆ ಎಂದರು.
ವೇದಿಕೆ ಮೇಲೆ ಸಮಾಜ ಸೇವಕ ಶಿವಾನಂದ ಗುಂದಗಿ ಹಾಗೂ ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿದರು.
ರಾಷ್ಟ್ರೀಯ ಬಸವ ದಳದ ಬೀದರ ದಕ್ಷಿಣ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟನಳ್ಳಿ ಸ್ವಾಗತಿಸಿ ನಿರೂಪಿಸಿದರು.
ಆಸಕ್ತ ವಧು-ವರರು ಮನವಿ ಸಲ್ಲಿಸಬೇಕಾದ ಕೊನೆಯ ದಿನಾಂಕ: 29-11-2020. ಸಾಯಂಕಾಲದ ವರೆಗೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸುವ ವಿಳಾಸ: ಮೋದಿ ಮೆಡಿಕಲ್ ಸ್ಟೋರ್, ರೈಲ್ವೆ ಸ್ಟೇಷನ್ ಹಿಂದುಗಡೆ, ಎಲ್.ಐ.ಸಿ. ಆಫಿಸ್ ಹಿಂದುಗಡೆ, ಬೀದರ. ಈ ವಿಳಾಸಕ್ಕೆ ಅರ್ಜಿ ತಂದು ತಲುಪಿಸಬೇಕು. ಮೊಬೈಲ್: 9448400365, 9148282730, 9035100710 ಗೆ ಸಂಪರ್ಕಿಸಬೇಕಾಗಿ ವಿನಂತಿ.

ವಧು-ವರರು ಉಚಿತ ಸಾಮೂಹಿಕ ವಿವಾಹಕ್ಕಾಗಿ ನಮ್ಮ ಸಂಸ್ಥೆ ಸಲ್ಲಿಸಬೇಕಾದ ದಾಖಲೆಗಳು: 1) ಪಾಲಕರ ಒಪ್ಪಿಗೆ ಪತ್ರ ಮತ್ತು ಪಾಲಕರ ಆಧಾರ ಕಾರ್ಡ್ 2) ಜನನ ದಾಖಲೆ ಪ್ರಮಾಣ ಪತ್ರ/ಶಾಲಾ ದಾಖಲಾತಿ ಪ್ರಮಾಣ ಪತ್ರ 3) ಪಾಸ್‍ಪೋರ್ಟ್ ಅಳತೆಯ ನಾಲ್ಕು ಭಾವಚಿತ್ರಗಳು 4) ರೇಶನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಧು-ವರರ ಆಧಾರ ಕಾರ್ಡ್ 5) ವಾಸ್ತವ್ಯ ಪ್ರಮಾಣ ಪತ್ರ 6) ಕೋರ್ಟ್ ಅಫಿಡವಿಟ್ ಈ ದಾಖಲೆಗಳನ್ನು ತಪ್ಪದೇ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅಂತಹ ಜೋಡಿಗಳಿಗೆ ಮದುವೆ ಮಾಡಿಸಲು ಆಗುವುದಿಲ್ಲ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಶಿಕಾಂತ ಮೋದಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.