ಜ.7 ರೊಳಗೆ ಅರ್ಜಿ ವಿಲೇಗೊಳಿಸಲು ಸೂಚನೆ

ಧಾರವಾಡ, ಜ5- ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗಾಗಿ ಕಳೆದ ಡಿಸೆಂಬರ್ 17 ರ ವರೆಗೆ ಸ್ವೀಕೃತಿಯಾಗಿರುವ ಎಲ್ಲಾ ಅರ್ಜಿಗಳನ್ನು ಜನೇವರಿ 07 ರೊಳಗೆ ವಿಲೇಗೊಳಿಸಬೇಕೆಂದು ಮತದಾರರ ಯಾದಿ ವಿಶೇಷ ಪರಿಷ್ಕರಣೆ ಕಾರ್ಯದ ವೀಕ್ಷಕಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಮತದಾರರ ಯಾದಿ ಪರಿಷ್ಕರಣೆಯ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಯಾದಿ ಪರಿಷ್ಕರಣೆ ಕೈಗೊಳ್ಳುವಾಗ ಜಿಲ್ಲಾ ಚುನಾವಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಮತಗಟ್ಟೆ ಮಟ್ಟದ ಅಧಿಕಾರಗಳು ಹೀಗೆ ಬಹು ಹಂತಗಳಲ್ಲಿ ಅಚ್ಚುಕಟ್ಟಾಗಿ ಅರ್ಜಿಗಳನ್ನು ಪರಿಶೀಲನೆ ಮಾಡಬೇಕು, ಅನಿವಾಸಿ ಭಾರತೀಯರ ಅರ್ಜಿಗಳಿದ್ದರೆ ಅವುಗಳು ಯಾವ ಹಂತದಲ್ಲಿವೆ ಎಂಬುದು ಗಮನಿಸಬೇಕು.
ಮತಗಟ್ಟೆ ಹಂತದ ಅಧಿಕಾರಿಗಳು ಅರ್ಜಿದಾರರ ಮನೆಗೆ ತೆರಳಿ ಖುದ್ದು ಪರಿಶೀಲನೆ ಮಾಡಬೇಕು. ಬಿಎಲ್‍ಓ ಗಳು ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಗೆ ನೋಂದಣಾಧಿಕಾರಿಗಳು ಸೇರ್ಪಡೆ ಮಾಡಿ, ಅವರಿಗೆ ಮತದಾರರ ಗುರುತಿನ ಚೀಟಿ ವಿತರಿಸಲು ಕ್ರಮಕೈಗೊಳ್ಳಬೆಕು. ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ 17 ರ ವರೆಗೆ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ಅರ್ಹರಾಗಿರುವ 18 ವರ್ಷ ತುಂಬಿದ ಹೊಸ ಮತದಾರರಿಗೆ ಬರುವ ಜನೇವರಿ 25 ರಂದು ರಾಷ್ಟ್ರೀಯ ಮತದಾರರ ದಿನದಂದು ಮತದಾರರ ಗುರುತಿನ ಕಾರ್ಡ್ ವಿತರಿಸಲು ಕ್ರಮ ಜರುಗಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ನವೆಂಬರ್ 18 ರಿಂದ 2021 ರ ಜನೇವರಿ 2 ರ ವರೆಗೆ ಮತದಾರರ ಪಟ್ಟಿ ಸೇರ್ಪಡೆಗೆ 10,449 ಅರ್ಜಿಗಳು, ಪಟ್ಟಿಯಿಂದ ತೆಗೆದುಹಾಕಲು 6,123, ತಿದ್ದುಪಡಿಗಾಗಿ 2,421 ಹಾಗೂ ವರ್ಗಾವಣೆಗಾಗಿ 993 ಅರ್ಜಿಗಳು ಸ್ವೀಕೃತಿಯಾಗಿವೆ. ಇವುಗಳ ಸ್ವೀಕೃತಿ ಮತ್ತು ವಿಲೇವಾರಿಯನ್ನು ಇಆರ್‍ಓ ನೆಟ್ ಮೂಲಕ ಪ್ರತಿದಿನ ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ. ಸುಶೀಲಾ ವೇದಿಕೆಯಲ್ಲಿದ್ದರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ: ಸುರೇಶ್ ಇಟ್ನಾಳ, ಉಪವಿಭಾಗಾಧಿಕಾರಿ ಡಾ: ಬಿ. ಗೋಪಾಲಕೃಷ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.